ಮೊಟ್ಟೆ ಖರೀದಿಯಲ್ಲಿ ಅಕ್ರಮ: ಶಶಿಕಲಾ ಜೊಲ್ಲೆಯ ವ್ಯಂಗ್ಯ ಭಾವಚಿತ್ರ ಮತ್ತು ಮೊಟ್ಟೆಗಳನ್ನು ಹಿಡಿದು ಮಹಿಳಾ ಕಾಂಗ್ರೆಸ್ ವತಿಯಿಂದ ಆಕ್ರೋಶ
ದಾವಣಗೆರೆ: ಮೊಟ್ಟೆ ಖರೀದಿಯಲ್ಲಿ ಅಕ್ರಮ ನಡೆಸಿರುವ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರನ್ನು ಶಾಸಕತ್ವ ಸ್ಥಾನದಿಂದ ವಜಾಗೊಳಿಸಿ ಭ್ರಷ್ಟಾಚಾರ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಹಲವಾರು ಕಾರ್ಯಕರ್ತರು ಶಶಿಕಲಾ ಜೊಲ್ಲೆಯ ವ್ಯಂಗ್ಯ ಭಾವಚಿತ್ರ ಮತ್ತು ಮೊಟ್ಟೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಜಾಧವ್, ಹಿಂದಿನ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ತಂದಿದ್ದ ಹಲವು ಯೋಜನೆಗಳಲ್ಲಿ ಅಪೌಷ್ಠಿಕತೆಯ ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು ಒಂದಾಗಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರದ ಸಚಿವೆ ಮತ್ತು ಶಾಸಕರೊಬ್ಬರು ಸೇರಿ ಮೊಟ್ಟೆ ನೀಡುವಲ್ಲಿ ಕಮೀಷನ್ ಪಡೆದು ಹಗರಣ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗರ್ಭಿಣಿಯರು, ಬಾಣಂತಿಯರು ಮತ್ತು ಅಪೌಷ್ಠಿಕತೆಯ ಮಕ್ಕಳಿಗೆ ನೀಡುವ ಮೊಟ್ಟೆ ಖರೀದಿಯಲ್ಲಿ ಕೂಡ ಅಕ್ರಮ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ಮತ್ತು ಶಾಸಕ ಪರಪ್ಪ ಮುನವಳ್ಳಿ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೀಣಾ ಕಾಶಪ್ಪನವರ್ ಮಾತನಾಡಿ, ಕಳೆದ ೨ ವರ್ಷಗಳ ಹಿಂದೆ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದ್ದು, ಇಂತಹ ಸರ್ಕಾರದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ಕೇವಲ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಸಾಲದು. ಸರ್ಕಾರವನ್ನೇ ವಿಸರ್ಜಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ, ಶ್ರೀಮತಿ ಸುಷ್ಮಾ ಪಾಟೀಲ್ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್‌ನ ಕವಿತಾ ಚಂದ್ರಶೇಖರ್, ಶ್ರೀಮತಿ ಆಶಾಮುರುಳಿ, ದ್ರಾಕ್ಷಾಯಣಮ್ಮ, ಬ್ಲಾಕ್ ಅಧ್ಯಕ್ಷರುಗಳಾದ ರಾಜೇಶ್ವರಿ ಮತ್ತು ಶುಭಮಂಗಳ, ರಾಧಾಬಾಯಿ, ಗೀತಾ ಪ್ರಶಾಂತ್, ಗೀತಾ ಚಂದ್ರಶೇಖರ್, ಮಂಜಮ್ಮ, ರುದ್ರಮ್ಮ, ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ್, ಎಸ್.ಮಲ್ಲಿಕಾರ್ಜುನ್, ಕೊಡಪಾನ ದಾದಾಪೀರ್, ರಾಕೇಶ್, ಮೊಟ್ಟೆ ದಾದಾಪೀರ್, ಜಿಕ್ರಿಯಾ, ಶ್ರೀಕಾಂತ್ ಬಗರೆ, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.