ಸಂಸದ ಸಿದ್ದೇಶ್ವರ್ ಕೊಟ್ಟಮಾತಿನಂತೆ ಪೆಟ್ರೋಲ್ ಹಾಕಿಸಬೇಕು ಇಲ್ಲವಾದರೆ ಬಹಿರಂಗ ಕ್ಷಮೆ ಯಾಚಿಸಬೇಕು: ಜಿಲ್ಲಾ ಕಿಸಾನ್ ಕಾಂಗ್ರೆಸ್ ಆಗ್ರಹ
ದಾವಣಗೆರೆ: ಸಂಕಷ್ಟದಲ್ಲಿರುವವರು ಯಾರೇ ಬಂದರೂ ಉಚಿತ ಪೆಟ್ರೋಲ್ ನೀಡುವುದಾಗಿ ಹೇಳಿದ್ದ ಸಂಸದರು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವರ ಜಿಎಂಐಟಿ ಕಾಲೇಜು ಆವರಣ, ಮನೆ ಹಾಗೂ ಅವರು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಹೋಗಿ ಉಚಿತ ಪೆಟ್ರೋಲ್ ಕೇಳಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸಂಸದರ ಕಚೇರಿ ಮುಂದೆ ಪೆಟ್ರೋಲ್ ಪಡೆಯಲು ಜಿಲ್ಲಾ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ವಾಹನಗಳೊಂದಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಶೆಟ್ಟಿ ಸಂಸದರು ದಾವಣಗೆರೆಯ ಜನತೆಗೆ ಉಚಿತ ಪೆಟ್ರೋಲ್ ನೀಡುವ ಭರವಸೆ ನೀಡಿದ್ದರು.
ಅದರಂತೆ ಇಂದು ಸಂಕಷ್ಟದಲ್ಲಿರುವ ಜನರು ಸಂಸದರ ಕಚೇರಿ ಮುಂದೆ ಬಂದಿದ್ದು, ಸಂಸದರು ಎಲ್ಲಿ, ಯಾವಾಗ ಉಚಿತವಾಗಿ ಪೆಟ್ರೋಲ್ ಕೊಡುತ್ತಾರೆ? ಎಷ್ಟು ಕೊಡುತ್ತಾರೆ ಎಂದು ತಿಳಿಸದರೆ ಅಲ್ಲಿಗೆ ಜನರು ಹೋಗಿ ಅದರ ಸದುಪಯೋಗ ಪಡೆದುಕೊಳ್ಳುತ್ತಾರೆ ಎಂದರು.
ಕಿಸಾನ್ ಕಾಂಗ್ರೆಸ್ ಮುಖಂಡ ಸುರೇಶ್ ಜಾಧವ್ ಮಾತನಾಡಿ, ಸಂಕಷ್ಟ ಅಂತ ಹೇಳಿಕೊಂಡು ಬಂದ ಜನರಿಗೆ ಸಂಸದರು ಉಡಾಫೆಯಾಗಿ ಮಾತನಾಡುವುದು ರೂಢಿಯಾಗಿ ಬಿಟ್ಟಿದೆ. ಈಗ ಕೊಟ್ಟ ಮಾತನ್ನು ಅವರು ಉಳಿಸಿಕೊಳ್ಳಬೇಕು ಇಲ್ಲವಾದರೆ ಬಹಿರಂಗವಾಗಿ ಎಲ್ಲಾ ಜನರಲ್ಲಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಮುಖಂಡರುಗಳಾದ ಪ್ರವೀಣ್ ಕುಮಾರ್, ಮಾಲತೇಶ್ ಜೆ.ಆರ್, ಮೊಹಮ್ಮದ್ ಜಿಕ್ರಿಯಾ, ಹಾಲೇಶ್ ಬಸನಾಳ್, ಮಂಜುನಾಥ್ ಸ್ವಾಮಿ, ಶಿವಕುಮಾರ್ ಬೇತೂರು, ಹರೀಶ್ ಕೆ.ಎಲ್, ಬಾಷ, ತಿಪ್ಪೇಶ್ ಮತ್ತಿತರರು ಭಾಗವಹಿಸಿದ್ದರು