Video News: ದಾವಣಗೆರೆ ಜಿಲ್ಲೆಯಲ್ಲಿ ‘ಎಂಎಸ್ಟಿ’ ಯಶವಂತರಾವ್ ಜಾಧವ್ ಹೊಸ ಬಾಂಬ್..!

ದಾವಣಗೆರೆ ಜಿಲ್ಲೆಯಲ್ಲಿ, ಎಂಎಸ್ಟಿ, ಯಶವಂತರಾವ್ ಜಾಧವ್, ಹೊಸ ಬಾಂಬ್,

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಡಿಸಿರುವ ವೈಎಸ್ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಬಾಂಬ್ ಬೆನ್ನಲ್ಲಿಯೇ ದಾವಣಗೆರೆಯಲ್ಲಿ ಎಂಎಸ್ಟಿ (ಮಲ್ಲಿಕಾರ್ಜುನ್, ಶಿವಶಂಕರಪ್ಪ ಟ್ಯಾಕ್ಸ್) ಆರಂಭಗೊಂಡಿರುವ ಆರೋಪ ಕೇಳಿ ಬಂದಿದೆ.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಈ ಎಂಎಸ್ಟಿ ಕುರಿತು ಗಂಭೀರ ಆರೋಪಮಾಡಿದ್ದು, ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ನಿಜವಾದ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಶೇ.40 ಸರ್ಕಾರ, ಪೇಟಿಎಂ ಸರ್ಕಾರ ಎಂದೆಲ್ಲ ಅಪ ಪ್ರಚಾರ ಮಾಡಿ 5 ಗ್ಯಾರಂಟಿ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಅವೆಲ್ಲ ಇಂದು ಹುಸಿಯಾಗಿವೆ. ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಸಚಿವರೊಬ್ಬರ ಹಗರಣದ ದಾಖಲೆಯನ್ನು ಸಂಗ್ರಹಿಸಿ ಪೆನ್ ಡ್ರೈ ವ್ ನಲ್ಲಿ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ.

ರಾಜ್ಯಮಟ್ಟದಲ್ಲಿ ವೈಎಸ್ಟಿ ಎಂದು ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಎಂಎಸ್ಟಿ ಆರಂಭಗೊಂಡಿದೆ. (ಮಲ್ಲಿಕಾರ್ಜುನ್, ಶಿವಶಂಕರಪ್ಪ ಟ್ಯಾಕ್ಸ್) ಇದಕ್ಕೆ ತಾಜಾ ಉದಾಹರಣೆ ಎಂದರೆ ಭೀಮ ಸಮುದ್ರದಲ್ಲಿ ನಡೆಯುತ್ತಿರವ ಮ್ಯಾಂಗನಿಸ್ ಗಣಿಗಾರಿಕೆಯನ್ನು ಕಳೆದ 1 ತಿಂಗಳಿಂದ ನಿಲ್ಲಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಟನ್ನಿಗೆ 500 ರೂಪಾಯಿ. ನೀಡಬೇಕು. ಇಲ್ಲದಿದ್ದರೆ ಗಣಿಗಾರಿಕೆ ನಡೆಯಲು ಬಿಡುವುದಿಲ್ಲ ಎಂದು ಗಣಿ ಸಚಿವರು ಷರತ್ತು ವಿಧಿಸಿರುವುದೇ ಸದ್ಯ ಭೀಮಸಮುದ್ರದಲ್ಲಿ ಗಣಿಗಾರಿಕೆ ನಿಲ್ಲಲು ಪ್ರಮುಖ ಕಾರಣ ಎಂದು ಯಶವಂತರಾವ್ ಜಾಧವ್ ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಮಂಜಸವಾದ ಉತ್ತರ ನೀಡಬೇಕು. ಮಲ್ಲಿಕಾರ್ಜುನ್ ಸಚಿವರಾಗುತ್ತಿದ್ದಂತೆಯೆ ದಾವಣಗೆರೆ ಜಿಲ್ಲೆಯ ಎಲ್ಲ ಉನ್ನತಾಧಿಕಾರಿಗಳು ಭಯಭೀತ ರಾಗಿದ್ದಾರೆ. ಅವರು ಕೇಳುವ ಹಣಕ್ಕೆ ಅಧಿಕಾರಿಗಳು ಭಯಗೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಎಂಎಸ್ಟಿ ವಿವರಗಳನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಕಾಡುಪ್ರಾಣಿಗಳ ಅಕ್ರಮ ಸಾಕಾಣಿಕೆ ಪ್ರಕರಣದಲ್ಲಿ ಅರಣ್ಯಾಧಿಕಾರಿ ಜಗನ್ನಾಥ್ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು 4 ನೇ ಆರೋಪಿಯನ್ನಾಗಿ ಮಾಡಿರುವ ಬಗ್ಗೆ ಅವರಿಗೆ ಇಂದು ತಪ್ಪಿನ ಅರಿವಾಗಿದೆ. ಪ್ರಕರಣದಲ್ಲಿ ಮಲ್ಲಿಕಾರ್ಜುನ್ ಅವರನ್ನೇ ಮೊದಲ ಆರೋಪಿಯನ್ನಾಗಿಸಬೇಕಿತ್ತು. ಆದರೆ ಜಗನ್ನಾಥ್ ಅದನ್ನು ಮಾಡದೇ 4 ನೇ ಆರೋಪಿಯನ್ನಾಗಿ ಮಾಡಿದ್ದಾರೆ. ಇದೀಗ ಅವರ ಎತ್ತಂಗಡಿಯಾಗಿದೆ. ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ ಎಂದು ಯಶವಂತರಾಜ್ ಜಾಧವ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!