ಮುಖ್ಯಮಂತ್ರಿ ಸ್ಥಾನಕ್ಕೆ ಜಟಾಪಟಿ.! ಹಿಂದುಳಿದ ಜಾತಿಯವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ಯಾರು.?

ಬೆಂಗಳೂರು: ಸಿಎಂ ಬದಲಾವಣೆ ಸುಳಿವು ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಜಟಾಪಟಿ ಶುರುವಾಗಿದ್ದು, ಅತ್ತ ಕಡೆ ವಿವಿಧ ಮಠಾಧೀಶರು ವೀರಶೈವ ಲಿಂಗಾಯತರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ದಲಿತರನ್ನ, ಮತ್ತೊಂದೆಡೆ ಹಿಂದುಳಿದ ಜಾತಿಯವರನ್ನ ಮುಖ್ಯಮಂತ್ರಿ ಗದ್ದುಗೆಗೆ ಏರಿಸುವಂತೆ ಜಟಾಪಟಿ ಪ್ರಾರಂಭವಾಗಿದೆ.
ಇಂದು ಹಿಂದುಳಿದ ಜಾತಿಗಳ ಮುಖಂಡ ಹಾಗೂ ಹಿರಿಯ ಹೋರಾಟಗಾರ ಹೆಚ್.ನರಸಿಂಹಪ್ಪ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹಿಂದುಳಿದ ಜಾತಿಯವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಇದುವರೆಗೂ ಹಿಂದುಳಿದ ವರ್ಗ ಅಂದ್ರೆ ವೋಟ್ ಬ್ಯಾಂಕ್ ಆಗಿತ್ತು. ಆದರೆ, ಅದೀಗ ಬದಲಾಗಿದೆ. ಕೇಂದ್ರದಲ್ಲಿ ಸದ್ಯ 72 ಜನರಲ್ಲಿ 27 ಜನರಿಗೆ ಹಿಂದುಳಿದ ವರ್ಗದವರಿಗೆ ಪ್ರಾಧಾನ್ಯತೆ ಕೊಡಲಾಗಿದೆ. ಅತ್ಯಂತ ಸಾಮಾನ್ಯ ವರ್ಗಗಳ ಜನರು ಕೂಡಾ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಇದಕ್ಕೆ ಪ್ರಧಾನಿವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಆದರೆ, ನಮ್ಮ ರಾಜ್ಯದಲ್ಲಿ ಈ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ನಮ್ಮ ರಾಜ್ಯದ ಮಂತ್ರಿಮಂಡಲ ಕೆಲವೇ ವರ್ಗಗಳಿಗೆ ಮೀಸಲಾಗಿದ್ದು, ಬಿಜೆಪಿ ಕೇವಲ ಒಂದೇ ಒಂದು ಜಾತಿಯನ್ನು ನಂಬಿಕೊಂಡು ಹೋದ್ರೆ 30-40 ಸೀಟ್ ಬರಬಹುದಷ್ಟೇ. ಎಲ್ಲಾ ವರ್ಗಗಳು ಒಟ್ಟಿಗೆ ಇಲ್ಲ ಅಂದ್ರೆ ಸರ್ಕಾರ ರಚನೆ ಸಾಧ್ಯವಿಲ್ಲ ಇದನ್ನು ಅರಿತುಕೊಂಡು ಹಿಂದುಳಿದ ವರ್ಗದವರಿಗೆ ಸಿಎಂ ಸ್ಥಾನಕ್ಕೆ ಆದ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಬಿಜೆಪಿ ಎರಡು ವರ್ಷದಿಂದ ಆಡಳಿತ ಮಾಡುತ್ತಿದೆ. ಮುಂದೆ ಏನಾಗಲಿದೆ ಗೊತ್ತಿಲ್ಲ. ಒಂದೇ ಜಾತಿಗೆ ಅಧಿಕಾರ ಸೀಮಿತಗೊಳ್ಳಬಾರದು. ಅಧಿಕಾರ ಶೇರಿಂಗ್ ತುಂಬಾನೆ ಮುಖ್ಯವಾದುದು. ಎಲ್ಲಾ ವರ್ಗಗಗಳಿಗೆ ಸಮಾನ ಸ್ಥಾನ ಬೇಕು ಎಂದು ಹೇಳಿದರು.
ಈಗಾಗಲೇ ಸಿಎಂ ಸ್ಥಾನಕ್ಕೆ ಒಂದು ವರ್ಗದಿಂದ ಇಬ್ಬರು, ಇನ್ನೊಂದು ವರ್ಗದಿಂದ ಇಬ್ಬರ ಹೆಸರು ಕೇಳಿ ಬರ್ತಿದೆ. ಆದರೆ, ಹಿಂದುಳಿದ ವರ್ಗದಿಂದ ಯಾವುದೇ ಹೆಸರು ಕೇಳಿಬರುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ನಾವು ಮನವಿ ಕೊಡುತ್ತೇವೆ. ರಾಜ್ಯಪಾಲರು ಕೂಡಾ ಹಿಂದುಳಿದ ವರ್ಗದವರಾಗಿದ್ದು, ಅವರಿಗೂ ಕೂಡಾ ನಾವು ಕೋರುತ್ತೇವೆ ಅಡ್ವೈಸರಿ ಕೌನ್ಸಿಲ್ ಮಾಡಬೇಕು. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಕಮಿಟಿಯಲ್ಲಿ ಚರ್ಚೆಯಾಗಬೇಕೆಂದು ವಿನಂತಿಸುತ್ತೇವೆ ಎಂದರು.
ಹಿಂದುಳಿದ ವರ್ಗಗಳನ್ನು ಬಳಸಿಕೊಳ್ಳಲು ಕಾಂಗ್ರೆಸ್ ಬಹಳ ಪ್ರಯತ್ನ ಮಾಡುತ್ತಿದೆ. ಅನೇಕ ಭಾಗ್ಯಗಳು ಕೂಡಾ ಬಂದವು. ಆದರೆ, ಅವೆಲ್ಲವೂ ಕೂಡಾ ದುರ್ಭಾಗ್ಯವಾಗಿ ಹೋಯಿತು ಎಂದು ಕುಟುಕಿದರು.
ಸಿಎಂ ಮನೆಗೆ ಸ್ವಾಮೀಜಿಗಳ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮೀಜಿಗಳಿಗೆ ಮಠಗಳಲ್ಲಿ ಮಾಡಲು ಬಹಳಷ್ಟು ಕೆಲಸ ಇದೆ. ಅದನ್ನು ಬಿಟ್ಟು ಮಂತ್ರಿಗಳ ರೀತಿಯಲ್ಲಿ ಕೆಲಸ ಮಾಡುವುದು ಸರಿಯಿಲ್ಲ. ಸ್ವಾಮೀಜಿಗಳಂದ್ರೆ ಶೃಂಗೇರಿ ಸ್ವಾಮೀಜಿ ಹಾಗೂ ಸುತ್ತೂರು ಶ್ರೀಗಳ ರೀತಿ ಇರಬೇಕು. ಮಠ ಹಾಗೂ ಭಕ್ತರ ನಡುವೆ ಒಡನಾಟ ಇರಬೇಕು. ಅದನ್ನು ಬಿಟ್ಟು ಬಿಸಿನೆಸ್ ಮಾಡುವುದಕ್ಕೆ ಸ್ವಾಮೀಜಿಗಳು ಮುಂದಾಗಬಾರದು ಎಂದು ರಾಜಕೀಯದಲ್ಲಿ ಮಠಾಧೀಶರ ಪ್ರವೇಶಕ್ಕೆ ಆಕ್ಷೇಪಿಸಿದರು.