ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸೀಟ್ ಗೆಲ್ಲುವ ವಿಶ್ವಾಸ – ಬಿ ಎಸ್ ಯಡಿಯೂರಪ್ಪ
ದಾವಣಗೆರೆ: ರಾಜ್ಯಾದ್ಯಂತ ಈಗಾಗಲೇ ಪ್ರವಾಸ ಆರಂಭಿಸಿದ್ದು, ಪಕ್ಷವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುವುದಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಜಿಎಂಐಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಈಗಾಗಲೇ ಪ್ರವಾಸ ಮಾಡಿ ಜನರ ಜತೆಗೆ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲೆಡೆ ಪ್ರವಾಸ ನಡೆಸಿ, ಪಕ್ಷವನ್ನು ಮತ್ತಷ್ಟು ಸಂಘಟಿಸಲು ಯತ್ನಿಸುತ್ತೇನೆ ಎಂದರು.
ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಪ್ರವಾಸ ನಡೆಸುತ್ತಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸೀಟ್ ಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು, ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಮುಂದಿನ ಚುನಾವಣೆ ಬಗ್ಗೆ ರಣತಂತ್ರ ರೂಪಿಸುವ ಮತ್ತು ಕೇಂದ್ರ, ರಾಜ್ಯದ ಯೋಜನೆಗಳನ್ನು ಜನರಿಗೆ ತಲುಪಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ರೇಣುಕಾಚಾರ್ಯ ಹಾಜರಿದ್ದರು.