ಸಂಗೀತ ಶಿಕ್ಷಕ, ವಿಶೇಷ ಗಾಯಕ, ಚಿತ್ರ ಕಲಾವಿದ ಪ್ರಹ್ಲಾದ್ ಎಸ್. ಭಟ್ (ಪಲ್ಲ) ಇನ್ನಿಲ್ಲ

ದಾವಣಗೆರೆ: ದಾವಣಗೆರೆ ನಗರದ ಸಾಮಾಜಿಕ ಕಾರ್ಯಕರ್ತ, ಗಾಯಕ, ಚಿತ್ರ ಕಲಾವಿದ ಪ್ರಹ್ಲಾದ್ ಎಸ್. ಭಟ್ (52) ಬುಧವಾರ ನಸುಕಿನ ಜಾವ 4-30ಕ್ಕೆ ಕೆ.ಬಿ.ಬಡಾವಣೆಯ ತಮ್ಮ ನಿವಾಸದಲ್ಲಿ ನಿಧನರಾದರು.
ಕೆಲವು ವರ್ಷದಿಂದ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಅವರಿಗೆ ತಾಯಿ, ಪತ್ನಿ ಇದ್ದಾರೆ. ಮಧ್ಯಾಹ್ನ ನಗರದ ಪಿಬಿ ರಸ್ತೆಯ ವೈಕುಂಠಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.
ನಗರದ ಎಸ್ಸೆಸ್ ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದಲ್ಲಿ ಕಲಾವಿದರಾಗಿ, ನಳಂದಾ ವಿದ್ಯಾನಿಕೇತನದಲ್ಲಿ ಸಂಗೀತ ಶಿಕ್ಷಕರಾಗಿದ್ದರು. ಐ-ಮಾಸ್ಟರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಪ್ತಸ್ವರ, ಸುಗಮ ಸಂಗೀತ ವಾಹಿನಿ ಸೇರಿ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಲೈಫ್‌ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಹಿರಿಯ ಸದಸ್ಯರಾಗಿದ್ದ ಪ್ರಹ್ಲಾದ್ ಭಟ್, ಇದುವರೆಗೆ 86 ಬಾರಿ ರಕ್ತದಾನ ಮಾಡಿದ್ದಾರೆ. ಹರಿಹರದಿಂದ ಹೊಸಪೇಟೆವರೆಗೆ ಹಮ್ಮಿಕೊಂಡಿದ್ದ ತುಂಗಭದ್ರಾ ನದಿ ಮೂಲ ಉಳಿಸಿ ಅಭಿಯಾನದ ರಿವರ್ ರಾಫ್ಟಿಂಗ್‌ನಲ್ಲಿ ಭಾಗಿಯಾಗಿದ್ದರು.
ಕೋವಿಡ್ ಸಂದರ್ಭದಲ್ಲಿ ಅಶಕ್ತರಿಗೆ ತರಕಾರಿ, ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇಂಚರ -ಬಾಲಕಾರ್ಮಿಕರ ಶಾಲೆಯ ಮಕ್ಕಳಿಗೆ ಉಚಿತ ಸಂಗೀತಾಭ್ಯಾಸ ಮಾಡಿಸಿದ್ದರು. ಮಕ್ಕಳಿಗಾಗಿ ಬೇಸಿಗೆ ಶಿಬಿರ, ರಂಗ ಗಾಯನ ತರಬೇತಿ ನೀಡುತ್ತಿದ್ದ ಅವರು ಹಲವಾರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಖ್ಯಾತ ಗಾಯಕ ಸಿ. ಅಶ್ವಥ್ ಸ್ಮರಣಾರ್ಥ ಪ್ರತಿ ವರ್ಷ ಗುರುನಮನ ಕಾರ್ಯಕ್ರಮ ಸಂಘಟಿಸಿ, ಸಾಧಕರನ್ನು ಸನ್ಮಾನಿಸುವಲ್ಲಿ ನಿರತರಾಗಿದ್ದರು.