ಮೂರನೆ ಅಲೆ ತಡೆಗಟ್ಟಲು ಸಕಲ ಸಿದ್ದತೆ ನಡೆಸಲಾಗುತ್ತಿದೆ: ಡಿಸಿ ಮಹಾಂತೇಶ್ ಬೀಳಗಿ
ದಾವಣಗೆರೆ: ಕೋವಿಡ್-19 ಸಂಭಾವ್ಯ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಪರಿಣಿತ ಸಮಿತಿಯೊಂದಿಗೆ ಚರ್ಚಿಸಿ, ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳು, ಮಾನವ ಸಂಪನ್ಮೂಲಗಳು ಸೇರಿದಂತೆ ಎಲ್ಲ ಬಗೆಯ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾಹಿತಿ ನೀಡಿದರು.
ಕೋವಿಡ್ ಮೂರನೇ ಅಲೆ ಬರುವ ಎಲ್ಲಾ ಸಾಧ್ಯತೆಗಳಿರುವುದಾಗಿ ತಜ್ಞರು ಸೂಚನೆ ನೀಡಿದ್ದು, ಅದನ್ನು ಎದುರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಆಕ್ಸಿಜನ್ ಜನರೇಷನ್ ಪ್ಲಾಂಟ್‌ಗಳಿದ್ದು, ಅವುಗಳು ಸಂಪೂರ್ಣ ಕೆಲಸ ನಿರ್ವಹಿಸಬೇಕೆಂದರೆ ಪವರ್ ಬ್ಯಾಕ್‌ಅಪ್ ಬೇಕು ಹಾಗೂ 250 ಕೆ.ಬಿ ಟ್ರಾನ್ಸ್ಫಾರ್ಮರ್ ಅನ್ನು ಆಗಸ್ಟ್ 15 ರೊಳಗಾಗಿ ಅಳವಡಿಸಬೇಕು. ಸಿಜಿ ಆಸ್ಪತ್ರೆಯಲ್ಲಿ 6 ಕೆಎಲ್ ಎಲೆಮೋ ಪ್ಲಾಂಟ್ ಇದ್ದು ಎಂಐಸಿಯು ಹಾಗೂ ವಿಐಸಿಯು ಗೆ ಪ್ರೆಶರ್ ಸಾಲುವುದಿಲ್ಲ ಎಂದು ಸಿಲಿಂಡರ್ ಗಳ ಬಳಕೆ ಮಾಡುತ್ತಿದ್ದರು. ನಂತರ ತಜ್ಞರ ಸಲಹೆಯ ಮೇರೆಗೆ ಮ್ಯಾನಿಫೋಲ್ಡ್ ನಿಂದ ಬೇರ್ಪಡಿಸಿ ಎಲೆಮೋ ಪ್ಲಾಂಟ್ ಮೂಲಕ ನೇರವಾಗಿ ಸಂಪರ್ಕ ನೀಡಿದ್ದು, ಆಕ್ಸಿಜನ್ ವ್ಯರ್ಥವಾಗದಂತೆ ತಡೆದು ಉಳಿಸಲಾಗುತ್ತಿದೆ.
ಜಿಲ್ಲೆಯಲ್ಲಿ 65 ರಿಂದ 66 ಮಕ್ಕಳ ತಜ್ಞ ವೈದ್ಯರುಗಳನ್ನು ಗುರುತಿಸಿದ್ದು, ಕೋವಿಡ್ 3 ನೇ ಅಲೆ ಬಂದರೆ ಅವರ ಸೇವೆಯನ್ನು ಸಮರ್ಥವಾಗಿ ಬಳಸಲಾಗುವುದು ಎಂದ ಅವರು, ಮೂರನೆ ಅಲೆ ಬರುವ ಎಲ್ಲಾ ಸಾಧ್ಯತೆಗಳಿದ್ದು ಜನರು ನಿರ್ಲಕ್ಷ್ಯ ವಹಿಸಬಾರದು. ಇನ್ನೂ ಶ್ರಾವಣ ಮಾಸ ಪ್ರಾರಂಭವಾಗಲಿದ್ದು ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರದೇ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ದೇವಸ್ಥಾನಗಳಲ್ಲಿ ಶನಿವಾರ ಹಾಗೂ ಭಾನುವಾರ ದರ್ಶನಕ್ಕೆ ನಿಷೇಧವಿದ್ದು, ಉಳಿದ ದಿನ ಸಾಮಾಜಿಕ ಅಂತರದೊಂದಿಗೆ ದರ್ಶನಕ್ಕೆ ಮಾತ್ರ ಅವಕಾಶವಿದೆ. ಸೇವೆಗಳಿಗೆ ಅವಕಾಶವಿಲ್ಲ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಹಾಕದೇ ಓಡಾಡುತ್ತಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಸಭೆ-ಸಮಾರಂಭಗಳಲ್ಲಿ, ಮಠಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸೀಮಿತ ಜನರೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಾತ್ರೆ, ಮಹೋತ್ಸವ ಮಾಡಲು ಅವಕಾಶವಿಲ್ಲ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ನಿರ್ವಹಣಾ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.