ಮೈಸೂರಿನಲ್ಲಿ ದೇವಸ್ಥಾನ ತೆರವು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ

 

ದಾವಣಗೆರೆ: ಮೈಸೂರಿನ ನಂಜನಗೂಡು ತಾಲ್ಲೂಕಿನಲ್ಲಿರುವ ಹುಚ್ಚಗಳ್ಳಿಯಲ್ಲಿದ್ದ ಮಹದೇವಮ್ಮ ಮತ್ತು ಭೈರವೇಶ್ವರ ದೇವಾಲಯವನ್ನು ಕೆಡವಿ ಹಾಕಿರುವುದನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು ಅಲ್ಲಿನ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ವೇದಿಕೆಯ ಶಿವಮೊಗ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಮಾತನಾಡಿ, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಚ್ಚಗಳ್ಳಿಯಲ್ಲಿದ್ದ ಮಹದೇವಮ್ಮ ಮತ್ತು ಭೈರವೇಶ್ವರ ದೇವಾಲಯವು ಸುಮಾರು ಐದುನೂರು ವರ್ಷಗಳ ಚರಿತ್ರೆಹೊಂದಿದ್ದು, ಯಾವುದೇ ಸೂಚನೆ ನೀಡದೆ ಅಲ್ಲಿನತಾಲ್ಲೂಕು ಆಡಳಿತ ರಾತ್ರೋರಾತ್ರಿ ಪೊಲೀಸರ ರಕ್ಷಣೆಯಲ್ಲಿ ದೇವಸ್ಥಾನವನ್ನು ಕೆಡವಿ ಹಾಕಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಧಾರ್ಮಿಕ ಕಟ್ಟಡಗಳು ಸಾರ್ವಜನಿಕ ರಸ್ತೆ, ಉದ್ಯಾನವನ ಮತ್ತು ಸ್ಥಳಗಳಲ್ಲಿ ಕಟ್ಟಬಾರದೆಂದು ಸರ್ಕಾರದ ಆದೇಶವಿರುವುದು ಸರಿ. ಆದರೆ, ಈ ದೇವಾಲಯವು ಸುಮಾರು ಐದು ನೂರು ವರ್ಷಗಳ ಇತಿಹಾಸ ಹೊಂದಿದೆ. ಈ ದೇವಾಲಯದ ಸಮೀಪದಲ್ಲೇ ಕೆಲವು ದಶಕಗಳ ಹಿಂದೆ ಸರ್ಕಾರ ನಂಜನಗೂಡು ಹುಲ್ಲಹಳ್ಳಿ ರಸ್ತೆಯನ್ನು ನಿರ್ಮಿಸಿದ್ದು, ಈಗ ರಸ್ತೆ ಅಗಲೀಕರಣ ಮಾಡಬೇಕಾಗಿ ಇರುವುದರಿಂದ ದೇವಸ್ಥಾನವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಕಾರಣ ಹೇಳಿ ತೆರವುಗೊಳಿಸಲಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಹುಚ್ಚಗಳ್ಳಿ ಮಹದೇವಮ್ಮ ಭೈರವೇಶ್ವರ ಮಂದಿರವನ್ನು ಅಕ್ರಮವಾಗಿ ಒಡೆದುರುಳಿಸಿರುವ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಮತ್ತು ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಬಗ್ಗೆ ತಕ್ಷಣ ಕಾನೂನು ಕ್ರಮವನ್ನು ಜರುಗಿಸಲು ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಈ ದೇವಸ್ಥಾನದೊಂದಿಗೆ ಗ್ರಾಮದ ಸುತ್ತಮುತ್ತಲ ಜನರು ಅತ್ಯಂತ ಆತ್ಮಬಂಧುತ್ವವನ್ನ ಹೊಂದಿದ್ದು, ದೇವಾಲಯ ಕೆಡವಿದ್ದರಿಂದ ಅವರೆಲ್ಲರೂ ಅತ್ಯಂತ ಮಾನಸಿಕ ತುಮುಲಗಳಿಗೆ ಒಳಗಾಗಿದ್ದಾರೆ. ಆದ್ದರಿಂದ ಅಕ್ರಮ ದೇವಸ್ಥಾನ ಒಡೆಯುವ ಕಾರ್ಯದಲ್ಲಿ ತೀರ್ಮಾನ ತೆಗೆದುಕೊಂಡ ಎಲ್ಲಾ ಅಧಿಕಾರಿಗಳ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಂಡು, ದೇವಸ್ಥಾನಕ್ಕೆ ಸೂಕ್ತ ಭೂಪ್ರದೇಶವನ್ನು ಒದಗಿಸಿ, ದೇವಾಲಯವನ್ನು ಪುನರ್ನಿಮಾಣ ಮಾಡಬೇಕೆಂದು ಒತ್ತಾಯಿಸಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಧಾರ್ಮಿಕ ಕಟ್ಟಡಗಳ ಬಗ್ಗೆ ಸಮಗ್ರ ನಿಯಮಗಳನ್ನು ಜಾರಿಗೆ ತಂದು, ಸದ್ಯದ ಪರಿಸ್ಥಿತಿಯಲ್ಲಿ ಹಿಂದೂ ದೇವಾಲಯಗಳನ್ನು ಸಂರಕ್ಷಿಸುವ ಅಗತ್ಯವಿದ್ದು, ಮುಸ್ಲಿಂ ಧಾರ್ಮಿಕ ಸ್ವತ್ತುಗಳ ಬಗ್ಗೆ ವಕ್ಫ್ ಆಕ್ಟ್ ೧೯೯೫ ಇರುವಂತೆ ಹಿಂದೂ ಧಾರ್ಮಿಕ ಸ್ವತ್ತುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಪ್ರತ್ಯೇಕ ಕಾನೂನನ್ನು ರಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಶ್ವನಾಥ್, ಮಂಜುನಾಥ್, ವೀರೇಶ್, ಚೇತನ್, ಗಣೇಶ್, ದರ್ಶನ್, ಮೂರ್ತಿ, ಚಂದ್ರಮೌಳಿ, ಗುರು, ವಿಜಯ್, ರಾಕೇಶ್, ಅವಿನಾಶ್, ಆನಂದ್, ಪುನೀತ್, ನವೀನ್, ನಾರಾಯಣ, ಕಲ್ಲೇಶ್, ಮಧು ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!