ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಫ್ಲೆಕ್ಸ್ ಬಳಕೆ: ಕಾನೂನು ಹೋರಾಟಕ್ಕೆ ಮುಂದಾದ ಸಂಸ್ಥೆ

ದಾವಣಗೆರೆ: ನಗರದಲ್ಲಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ನಿಷೇಧಿತ ಪ್ಲಾಸ್ಟಿಕ್ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ತೆರವು ಮಾಡದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ವಿಶ್ವಚೇತನ ಸಮಗ್ರ ಅಭಿವೃದ್ಧಿ ಸಂಸ್ಥೆ ಎಚ್ಚರಿಕೆ ನೀಡಿದರು.
ಸರ್ಕಾರವು ಹಲವಾರು ವರ್ಷಗಳ ಹಿಂದೆಯೇ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ನಿಷೇಧಿಸಿದ್ದರೂ ಸಹ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಫ್ಲೆಕ್ಸ್ ಬಳಕೆ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಹಲವು ಬಾರಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರೂ ಅಧಿಕಾರಿಗಳು ಬೇಜವಾಬ್ದಾರಿ ಹಾಗೂ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿರುವುದು ನೋಡಿದರೆ ಹಲವು ಅಧಿಕಾರಿಗಳು ಇದರಲ್ಲಿ ಲಾಭಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸಂಸ್ಥೆಯ ಹೆಚ್. ಮಾರುತಿ ಆಪಾದಿಸಿದ್ದಾರೆ.
ನಗರದ ತುಂಬೆಲ್ಲಾ ಪ್ಲಾಸ್ಟಿಕ್ ಫ್ಲೆಕ್ಸ್‌ಗಳದ್ದೇ ಕಾರುಬಾರಾಗಿದ್ದು, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಕಂಡು ಕಾಣದಂತೆ ನಡೆದುಕೊಳ್ಳುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿರುವ ಅವರು, ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

 
                         
                       
                       
                       
                       
                       
                       
                      