ಬೆಣ್ಣೆ ನಗರಿಯ ಪಕ್ಷೇತರರಿಗೆ ಟವೆಲ್ ಹಾಸುತ್ತಿರುವ ರಾಷ್ಟ್ರೀಯ ನಾಯಕರು
ದಾವಣಗೆರೆ : ಕೆಲ ತಿಂಗಳ ಹಿಂದೆ ಟಿಕೆಟ್‌ಗಾಗಿ ರಾಷ್ಟ್ರೀಯ ನಾಯಕರ ಬೆನ್ನು ಬಿದ್ದಿದ್ದ ಟಿಕೆಟ್ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಜಿಲ್ಲೆಯಲ್ಲಿ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವರ್ಚಸ್ ಆಧಾರದ ಮೇಲೆ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಸರಕಾರದ ರಚನೆಗೆ ಈಗಲೇ ಪಕ್ಷೇತರರಿಗೆ ಟವೆಲ್ ಹಾಸುತ್ತಿದ್ದಾರೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಈಗ ಪಕ್ಷೇತರರಿಗೆ ಡಿಮ್ಯಾಂಡ್ ಹೆಚ್ಚಿದ್ದು, ಮೇಲಿಂದ ಮೇಲೆ ರಾಷ್ಟ್ರೀಯ ಪಕ್ಷಗಳ ನಾಯಕರಿಂದ ದೂರವಾಣಿ ಕರೆ ಬರುತ್ತಿದೆ.
ಜಗಳೂರಿನಲ್ಲಿ ಎಚ್. ಪಿ. ರಾಜೇಶ್, ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಮಾಯಕೊಂಡ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಗೀಶ್ ಸ್ವಾಮಿ ಪತ್ನಿ ಪುಷ್ಪಾ ವಾಗೀಶ್ ಸ್ವಾಮಿ ಕಣಕ್ಕಿಳಿದಿದ್ದು, ಈ ಮೂವರು ಗೆಲ್ಲುವ ಕುದುರೆಯಾದ ಕಾರಣ ನಾಯಕರು ನಾಮುಂದು, ತಾಮುಂದು ಎಂದು ದುಂಬಾಲು ಬೀಳುತ್ತಿದ್ದಾರೆ.
ಈ ಮೂವರು ಗೆಲ್ಲುವ ಕುದುರೆಗಳಾಗಿದ್ದು, ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸ್ಥಳೀಯ ಆಪ್ತರ ಮೂಲಕ ಈ ಮೂವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಒಂದು ವೇಳೆ ಜಯ ಗಳಿಸಿದರೆ ತಮ್ಮ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಆದ ಪ್ರಾಬಲ್ಯವಿದ್ದರೂ, ಸ್ವತಃ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಮಾಡಾಳ್ ಮಲ್ಲಿಕಾರ್ಜುನ ಪರ ಕ್ಯಾಂಪೇನ್ ನಡೆಸಿದ್ದರು. ಇನ್ನು ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಜೈಲು ಸೇರುತ್ತಿದ್ದಂತೆ ಎಲ್ಲವೂ ಉಲ್ಟಾ ಪಲ್ಟಾ ಆಯ್ತು. ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತು. ಮಾಡಾಳ್ ಮಲ್ಲಿಕಾರ್ಜುನ್ ಅವರಿಗಾದರೂ ಬಿಜೆಪಿ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದರೂ ಲಂಚದ ಹಣ ಪಡೆದ ಆರೋಪದಲ್ಲಿ ಜೈಲು ಸೇರಿದ್ದ ಕಾರಣ ಕೇಸರಿ ಪಡೆ ನಿರಾಕರಿಸಿತು. ಆ ಬಳಿಕ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರನಾಗಿ ಕಣಕ್ಕಿಳಿದ್ದರು. ಇದಾದ ನಂತರ ಬಿಜೆಪಿ ಆರು ವರ್ಷಗಳ ಕಾಲ ಮಾಡಾಳ್ ಮಲ್ಲಿಕಾರ್ಜುನ್‌ರನ್ನು ಉಚ್ಚಾಟನೆ ಮಾಡಿತ್ತು.
ಅತಂತ್ರ ಸರಕಾರದ ಬಂದ್ರೆ ಬಿಜೆಪಿಯು ಅಧಿಕಾರ ಹಿಡಿಯಲು ಕೆಲ ಶಾಸಕರು ಬೇಕಾಗಬಹುದು ಎಂಬ ಲೆಕ್ಕಾಚಾರದಲ್ಲಿದೆ. ಇನ್ನು ಕಾಂಗ್ರೆಸ್ ಸಮೀಕ್ಷೆಗಳ ಪ್ರಕಾರ ಅಧಿಕಾರ ಹಿಡಿಯುವ ಸನಿಹದಲ್ಲಿದೆ. ಈ ಕಾರಣಕ್ಕಾಗಿ ಮಾಡಾಳ್ ಮಲ್ಲಿಕಾರ್ಜುನ್, ವಾಗೀಶ್ ಸ್ವಾಮಿ ಎಚ್. ಪಿ. ರಾಜೇಶ್ ಪರ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ.
ಜಗಳೂರಿನಿಂದ ಎಚ್. ಪಿ. ರಾಜೇಶ್ ಸ್ಪರ್ಧೆ ಬಯಸಿ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದರೆ ಕೊನೆ ಕ್ಷಣದಲ್ಲಿ ದೇವೇಂದ್ರಪ್ಪರಿಗೆ ಪಕ್ಷ ನೀಡಿತು. ಇದರಿಂದ ಮುನಿಸಿಕೊಂಡಿದ್ದ ಎಚ್. ಪಿ. ರಾಜೇಶ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಚುನಾವಣಾ ಪ್ರಚಾರದ ವೇಳೆ ಜನರ ಸಿಂಪತಿ ಗಳಿಸಿದ್ದ ರಾಜೇಶ್ ಗೆ ಲಿಂಗಾಯತ ಸಮುದಾಯದ ಮುಖಂಡರು ಬಹಿರಂಗವಾಗಿ ಬೆಂಬಲ ನೀಡಿದರು. ಇದೆಲ್ಲವನ್ನೂ ಗಮನಿಸಿರುವ ಕಾಂಗ್ರೆಸ್ ನಾಯಕರು, ಒಂದು ವೇಳೆ ರಾಜೇಶ್ ಗೆದ್ದರೆ ಪಕ್ಷಕ್ಕೆ ಮರಳಿ ಸೇರಿಸಿಕೊಂಡು ಬೆಂಬಲ ಪಡೆಯಲು ಯತ್ನ ಮುಂದುವರಿಸಿದ್ದಾರೆ.
ಬೇಡರ ಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ವಾಗೀಶ್ ಸ್ವಾಮಿಗೆ ಬೇಡ ಜಂಗಮ ಜಾತಿ ಪ್ರಮಾಣ ರದ್ದಾಗಿದ್ದರೂ, ಪತ್ನಿಗೆ ಬೇಡ ಜಂಗಮ ಎಸ್ಸಿ ಸರ್ಟಿಫಿಕೇಟ್ ಸಿಕ್ಕಿದ್ದೇ ವಾಗೀಶ್ ಸ್ವಾಮಿಗೆ ಆಯಿತು. ಪರಿಣಾಮ ಮಾಯಕೊಂಡದಿಂದ ವಾಗೀಶ್ ಸ್ವಾಮಿ ತನ್ನ ಪತ್ನಿಯನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದರು. ಕ್ಷೇತ್ರ ಎಸ್ಸಿಯಾದರೂ ಲಿಂಗಾಯಿತರ ಪ್ರಾಬಲ್ಯ ಹೆಚ್ಚಾಗಿರುವ ಕಾರಣ ವಾಗೀಶ್ ಸ್ವಾಮಿ ಪತ್ನಿಗೆ ಹೆಚ್ಚಿನ ಮತಗಳು ಬಿದ್ದಿವೆ ಎಂಬುದು ಲೆಕ್ಕಾಚಾರ. ಇಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ಸ್ಪರ್ಧೆ ಜೋರಾಗಿದೆ. ಒಂದು ವೇಳೆ ಪುಷ್ಪಾ ವಾಗೀಶ್ ಸ್ವಾಮಿ ಗೆದ್ದರೆ ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಸಾಕಷ್ಟು ಡಿಮ್ಯಾಂಡ್ ಇದ್ದು, ಈಗ ಪಕ್ಷೇತರರು ತಮ್ಮ ಅಸ ಬಿಡುಗಡೆ ಮಾಡುತ್ತಿದ್ದಾರೆ.