ಘನತ್ಯಾಜ್ಯ ಘಟಕಗಳ ನಿರ್ವಹಣೆ, ಪರಿಸರ ಸಂರಕ್ಷಣೆ ಕುರಿತ ಕಾರ್ಯಾಗಾರ
ದಾವಣಗೆರೆ: ಬೆಂಗಳೂರಿನ ಮಹಾತ್ಮಗಾಂಧಿ ಗ್ರಾಮೀಣ ಇಂಧನ, ದಾವಣಗೆರೆ ಸ್ಫೂರ್ತಿ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕಾಡಜ್ಜಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಘನ ತ್ಯಾಜ್ಯ ಘಟಕಗಳ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಐದು ದಿನಗಳ ಕಾಲ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ 5,500 ಸ್ವಸಹಾಯ ಸಂಘಗಳಿಗೆ ಇಂತಹ ಸಂಘಟನೆಗಳಿಗೆ ಪ್ರೇರಣೆ ಆದ ಸ್ಫೂರ್ತಿ ಅಂತಹ ಸಂಘ ಸಂಸ್ಥೆಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ.
ಈಗಾಗಲೇ 16 ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಲಾಗಿದ್ದು, ಅ. 2021 ಕ್ಕೆ 194 ಗ್ರಾಮ ಪಂಚಾಯಿತಿಯಲ್ಲಿ ಘಟಕಗಳನ್ನು ಆರಂಭಿಸಲಾಗುವುದು ಎಂದರು.ಪ್ರಮಾಣ ಪತ್ರ ವಿತರಿಸಿದ ಸ್ಫೂರ್ತಿ ಸಂಸ್ಥೆ ನಿರ್ದೇಶಕರಾದ ರೂಪಾನಾಯ್ಕ್ ಮಾತನಾಡಿ, ಮನೆಯಿಂದಲೇ ಮೊದಲು ತ್ಯಾಜ್ಯವನ್ನು ನಿರ್ವಹಣೆ ಮಾಡುವಂತೆ ಆಗಬೇಕು.
ಘನ ತ್ಯಾಜ್ಯ ವಿಲೇವಾರಿ ಘಟಕವು ಒಂದು ಉದ್ದಿಮೆಯಾಗಿ ಹೊರಹೋಮ್ಮಬೇಕು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆ ನೀಡಬೇಕಿದೆ. ಘನ ತ್ಯಾಜ್ಯ ನಿರ್ವಹಣೆ, ಸಾವಯವ ಗೊಬ್ಬರ, ಎರೆ ಹುಳು ಗೊಬ್ಬರಗಳ ತಯಾರಿಸಿ ಆರ್ಥಿಕವಾಗಿ ಮುಂದೆಬರಲು ಕರೆ ನೀಡಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃದ್ಧಿ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಅರವಿಂದ ಮಾತನಾಡಿ, ಹಳ್ಳಿಗಳು ಸ್ವಚ್ಛ ಸುಂದರವಾಗಿ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವುದರೊಂದಿಗೆ ಕಸದಿಂದ ರಸವನ್ನು ಮಾಡಿ ಮಹಿಳೆಯರು ಲಾಭ ಗಳಿಸಬೇಕು. ಗಾಂಧಿ ಕನಸು ನನಸಾಗಬೇಕಾದರೆ ಪ್ರತಿ ಹಳ್ಳಿಗಳು ಬದಲಾವಣೆ ಕಡೆಗೆ ಸಾಗಿದರೆ ಅಭಿವೃದ್ಧಿಗೆ ನಾಂದಿ ಆಗುತ್ತದೆ. ಇದು ನಮ್ಮ ಸಂಸ್ಥೆಯ ಆಶಯ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರೇಣುಕಾ, ಕೃಷ್ಣ, ಸಂಜೀವಿನಿ ಒಕ್ಕೂಟದ ಜಿಲ್ಲಾ ವ್ಯವಸ್ಥಾಪರಾದ ಭೋಜರಾಜ್, ಮಹಮದ್ ರಫೀಕ್ ಹಾಗೂ ಸ್ಫೂರ್ತಿ ಸಂಸ್ಥೆಯ ಸಿಬ್ಬಂದಿಗಳಾದ ಸುಜಾತಾ, ಸುಧಾ, ಗಿರಿಜಮ್ಮ, ಸುನಿತಾ, ಶಂಕರ್, ಗುರುಮೂರ್ತಿ, ರಜಿನಿಕಾಂತ್ ಮತ್ತು ಮಾರುತೇಶ ಭಾಗವಹಿಸಿದ್ದರು