ನೇಹಾ ಹಂತಕ ಫಯಾಜ್ಗೆ 90 ದಿನದಲ್ಲಿ ಗಲ್ಲು ಶಿಕ್ಷೆಯಾಗಬೇಕೆಂದು ಅಮಿತ್ ಶಾಗೆ ಮನವಿ ಸಲ್ಲಿಸಿದ ನೇಹಾ ಪೋಷಕರು

ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೊಲೆಯಾದ ನೇಹಾ ಹಿರೇಮಠ ಕುಟುಂಬಸ್ಥರು ಬುಧವಾರ ಭೇಟಿಯಾದರು.
ಹುಬ್ಬಳ್ಳಿಯಲ್ಲಿ ಅಮಿತ್ ಶಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ನೇಹಾ ಹಿರೇಮಠ ತಂದೆ, ತಾಯಿ ಹಾಗೂ ಸಹೋದರನನ್ನು ಭೇಟಿ ಮಾಡಿದರು.
ಭೇಟಿ ಬಳಿಕ ಮಾತನಾಡಿದ ನೇಹಾ ತಂದೆ, ‘ಅಮಿತ್ ಶಾ ಜತೆ 10 ನಿಮಿಷ ಮಾತನಾಡಿದ್ದೇವೆ, ಹಾಡಹಗಲೇ ಕಾಲೇಜು ಆವರಣದಲ್ಲಿ ನೇಹಾ ಬರ್ಬರ ಹತ್ಯೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿರ್ಭಯಾ ಕಾಯ್ದೆಯಂತೆ ನೇಹಾ ಕಾಯ್ದೆ ತಂದು ನೇಹಾ ಹಂತಕ ಫಯಾಜ್ಗೆ 90 ದಿನದಲ್ಲಿ ಗಲ್ಲು ಶಿಕ್ಷೆಯಾಗಬೇಕೆಂದು ಮನವಿ ಸಲ್ಲಿಸಿದ್ದೇನೆ. ಜೊತೆಗೆ ಫಾಸ್ಟ್ಟ್ರ್ಯಾಕ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯಬೇಕು. ಬೇರೆ ಹೆಣ್ಣುಮಕ್ಕಳಿಗೆ ಇಂತಹ ಅನ್ಯಾಯವಾಗದಂತೆ ಕ್ರಮಕ್ಕೆಒತ್ತಾಯಿಸಿದ್ದೇನೆ ಎಂದರು.
ಕೊಲೆ ಆರೋಪಿಗೆ ಉಗ್ರ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ಕಾಯ್ದೆ ತರಲು ಮನವಿ ಮಾಡಿದ್ದೇವೆ. ಈ ಬಗ್ಗೆ ಮನವಿ ಪತ್ರ ನೀಡಿದ್ದೇವೆ. ನಮ್ಮ ಮನವಿಗೆ ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.