ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ
ದಾವಣಗೆರೆ: ದೇಶದ ಗಡಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು 21 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಸಿ ನಿವೃತ್ತರಾಗಿ ಇಂದು ತವರಿಗೆ ಮರಳಿದ ವೀರಯೋಧ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹೆಚ್. ಸುರೇಶ್ ರಾವ್ ಘೋರ್ಪಡೆ ಅವರನ್ನು ನಗರದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಸ್ವಾಗತಿಸಲಾಯಿತು.
ವೀರಯೋಧ ಹೆಚ್. ಸುರೇಶ್ ರಾವ್ ಅವರು ಬೆಳಿಗ್ಗೆ ಇಲ್ಲಿನ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಸಿ.ಬಿ.ರಿಷ್ಯಂತ್ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಂತಸದಿಂದ ಸ್ವಾಗತಿಸಿದರು.
ಘೋರ್ಪಡೆಯವರು ತೋಳಹುಣಸೆಯ ಹನುಮಂತಪ್ಪ ಮತ್ತು ನಾಗಮ್ಮ ಇಟಗಿಯ ಪುತ್ರನಾಗಿದ್ದು, 2000 ನೇ ಇಸವಿಯಲ್ಲಿ ಶಿವಮೊಗ್ಗದಲ್ಲಿ ನಡೆದ ಬಿಎಸ್‌ಎಫ್ ರ‍್ಯಾಲಿಯಲ್ಲಿ ಆಯ್ಕೆಯಾಗಿ ಭಾರತೀಯ ಗಡಿ ಭದ್ರತಾ ಪಡೆಗೆ ಸೇರ್ಪಡೆಯಾಗಿದ್ದರು. 2002ರ ಸೆಪ್ಟೆಂಬರ್‌ನಲ್ಲಿ ಇಬ್ಬರು ಪಾಕಿ ಉಗ್ರರಿಗೆ ಗುಂಡಿಕ್ಕಿ ಭಾರತಕ್ಕೆ ಉಗ್ರರಿಂದಾಗುವ ಅನಾಹುತ ತಪ್ಪಿಸಿದ್ದರು. 2003ರಿಂದ 2006ರ ವರೆಗೆ ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದರು.
2009ರವರೆಗೆ ಮೂರು ವರ್ಷ ಬಾರ್ಮರ್ (ರಾಜಸ್ಥಾನ) ಐ.ಬಿ.ಯಲ್ಲಿ ಕೆಲಸ ಮಾಡಿದರು. ಅಲ್ಲಿಂದ ಮೂರು ವರ್ಷ ಎಎನ್‌ಒ ಎಸ್‌ಎಲ್ಪಿಯಲ್ಲಿ ಛತ್ತಿಸ್ಗಡದಲ್ಲಿ ಕಾರ್ಯನಿರ್ವಹಿಸಿದ್ದರು. ನೆಲದಲ್ಲಿ ಹೂತಿಟ್ಟಿದ್ದ ಬಾಂಬ್ಗಳನ್ನು ಯಾವುದೇ ಆಯುಧವಿಲ್ಲದೇ ಪತ್ತೆಹಚ್ಚಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು.
ವಾಲಾ ಗಾಂವ್ನಲ್ಲಿ ನಕ್ಸಲ್ ಎನ್ಕೌಂಟರ್ ಮಾಡಿದ್ದಕ್ಕಾಗಿ ಬಿಎಸ್‌ಎಫ್ನ ಅತ್ಯುನ್ನತ ಪದವಿ ಡಿಜಿಸಿಆರ್ (ಡೈರೆಕ್ಟರ್ ಜನರಲ್ ರೆಕಮಂಡೇಶನ್ ರೋಲ್) ನೀಡಿ ಸನ್ಮಾನಿಸಲಾಗಿತ್ತು. ಉದನ್ಪುರದಲ್ಲಿ ನದಿ ದಾಟುವಾಗ ತಮ್ಮದೇ ತಂಡದ ಬಾಂಬ್ಗಳು ಕಳೆದುಹೋದಾಗ ಹುಡುಕಿಕೊಟ್ಟು ‘ವೀರಯೋಧ’ ಎಂಬ ಬಿರುದಿಗೆ ಪಾತ್ರರಾಗಿದ್ದರು.
2015ರವರೆಗೆ ಮೂರು ವರ್ಷ ಬಿಸ್ಕಿನ್ (ಪಂಜಾಬ್)ನಲ್ಲಿ ಐ.ಬಿ. ಯಲ್ಲಿ ಕೆಲಸ ಮಾಡಿದ ಅವರು ಮತ್ತೆ ಎಲ್‌ಒಸಿ ರಜಾರಿಯಲ್ಲಿ (ಜಮ್ಮು ಮತ್ತು ಕಾಶ್ಮೀರ) ಕೆಲಸಕ್ಕೆ ನಿಯೋಜನೆಯಾಗಿದ್ದರು. ಬಳಿಕ ಮೂರೂವರೆ ವರ್ಷ ಸೈನ್ಯಕ್ಕೆ ಸೇರುವವರಿಗೆ ತರಬೇತುದಾರರಾಗಿ ಕೆಲಸ ಮಾಡಿದ್ದರು. 2019ರಿಂದ ಶ್ರೀನಗರದಲ್ಲಿ ವಿಐಪಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ಅವರ ಸೇವೆಯನ್ನು ಪರಿಗಣಿಸಿ ಹವಾಲ್ದಾರ್ ಆಗಿ ಪದೋನ್ನತಿ ನೀಡಲಾಗಿತ್ತು.
ಈಗ 21 ವರ್ಷಗಳ ನಿರಂತರ ಸೇವೆಯ ನಂತರ ಇದೀಗ ಅವರು ನಿವೃತ್ತರಾಗಿ ತವರಿಗೆ ವಾಪಾಸ್ಸಾಗಿದ್ದಾರೆ.