ವಿನಯ್ ಕುಮಾರ್ ಗೆ ನನ್ನ ಬೆಂಬಲವಿಲ್ಲ: ಈತನನ್ನು ಸೋಲಿಸಿ: ಸಿ.ಎಂ.ಕರೆ

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನೇ ಗೆದ್ದ ಹಾಗೆ ಎಂದು ಸಿ.ಎಂ.ಸಿದ್ದರಾಮಯ್ಯ ಘೋಷಿಸಿದರು.

ದಾವಣಗೆರೆಯಲ್ಲಿ ನಡೆದ ಪ್ರಜಾಧ್ವನಿ ಜನಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಕರೆ ನೀಡಿ ಮಾತನಾಡಿದರು.

ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿ ಮಾಡಿದ್ದೇನು ಎನ್ನುವುದನ್ನು ಭಾರತೀಯರಿಗೆ ತಿಳಿಸಿ ಮತ ಕೇಳುತ್ತಿಲ್ಲ. ಬದಲಿಗೆ ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬಂದಿದ್ದಾರೆ ಎಂದರು.

ಇಂಥಾ ಬಿಜೆಪಿಗೆ ಅನುಕೂಲ ಮಾಡಿಕೊಡಲು ಪಕ್ಷೇತರ ಅಭ್ಯರ್ಥಿಯಾಗಿ ವಿನಯ್ ಸ್ಪರ್ಧಿಸುತ್ತಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಗೆ ಓಟು ಹಾಕಿದರೆ,ಬಿಜೆಪಿಗೆ ಓಟು ಹಾಕಿದಂತೆ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನೀವುಗಳು ಹಾಕುವ ಪ್ರತೀ ಓಟು ನನಗೇ ಹಾಕಿದಂತೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಕಣದಲ್ಲಿ ಇದ್ದೇನೆ ಎಂದುಕೊಂಡು ಮತ ಹಾಕಿ ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು.

15 ಲಕ್ಷ ರೂಪಾಯಿ ಪ್ರತಿಯೊಬ್ಬ ಭಾರತೀಯರ ಖಾತೆಗೆ ಹಾಕ್ತೀನಿ ಎಂದು ನಂಬಿಸಿದ ಮೋದಿ ಈ ಹತ್ತು ವರ್ಷದಲ್ಲಿ 15 ರೂಪಾಯಿ ಕೂಡ ಹಾಕಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀನಿ ಎಂದು ಭಾರತೀಯರನ್ನು ನಂಬಿಸಿದ್ರು, ಕೆಲಸ ಕೇಲಿದ್ರೆ ಪಕೋಡ ಮಾರಾಟ ಮಾಡಿ ಎಂದು ನಂಬಿಕೆ ದ್ರೋಹ ಮಾಡಿದ್ರು‌. ಇಂಥಾ ನಂಬಿಕೆ ದ್ರೋಹಿಗಳಿಗೆ ಓಟು ಹಾಕಬೇಡಿ ಎಂದು ಕರೆ ನೀಡಿದರು.

ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ರೈತರನ್ನು ನಂಬಿಸಿದರು. ಆದರೆ ರೈತರ ಖರ್ಚು ಮೂರು ಪಟ್ಟು ಆಗುವಂತೆ ಮಾಡಿ ರೈತರಿಗೂ ದ್ರೋಹ ಮಾಡಿದ್ರು.

ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ಭಾರತೀಯರನ್ನು ನಂಬಿಸಿ ಓಟು ತಗೊಂಡ್ರು. ಈಗ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ, ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆಯೂ ಆಕಾಶ ಮುಟ್ಟಿತು‌. ಹೀಗೆ ನಿರಂತರವಾಗಿ ಭಾರತೀಯರಿಗೆ ದ್ರೋಹ ಬಗೆಯುತ್ತಲೇ ಇದ್ದಾರೆ. ನಿಮ್ಮ ಪ್ರತಿಯೊಂದು ಓಟಿಗೂ ದ್ರೋಹ ಬಗೆದಿದ್ದಾರೆ. ಇದೇ ದ್ರೋಹಿಗಳಿಂದ ಮತ್ತೆ ಮತ್ತೆ ಮೋಸ ಹೋಗಬೇಡಿ ಎಂದು ಕರೆ ನೀಡಿದರು.

ನುಡಿದಂತೆ ನಡೆದವರು v/s ನಂಬಿಕೆ ದ್ರೋಹಿಗಳ ನಡುವಿನ ಚುನಾವಣೆ

ಈ ಚುನಾವಣೆ ನುಡಿದಂತೆ ನಡೆದವರ ಮತ್ತು ನಂಬಿಕೆ ದ್ರೋಹಿಗಳ ನಡುವಿನ ಚುನಾವಣೆ. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿ. ನುಡಿದಂತೆ ನಡೆದು ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ನಿಮ್ಮ ಓಟಿನ ಘನತೆ ಹೆಚ್ಚಿಸಿದವರಿಗೆ ನಿಮ್ಮ ಮತ ನೀಡಿ ಎಂದು ಕರೆ ನೀಡಿದರು.

ವಿನಯ್ ಕುಮಾರ್ ಗೆ ನನ್ನ ಬೆಂಬಲವಿಲ್ಲ: ಈತನನ್ನು ಸೋಲಿಸಿ: ಸಿ.ಎಂ.ಕರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವಿನಯ್ ಕುಮಾರ್ ಗೆ ನನ್ನ ಬೆಂಬಲ ಇಲ್ಲ. ಈತ ಕಾಂಗ್ರೆಸ್ಸಿಗೆ ಬಂದು ಕೇವಲ ಆರು ತಿಂಗಳಾಗಿದೆ. ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್ ಕುಟುಂಬ ಆರಂಭದಿಂದಲೂ ಹತ್ತಾರು ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದೆ. ಪ್ರಭಾ ಮಲ್ಲಿಕಾರ್ಜುನ್ ಅತ್ಯಂತ ಉತ್ತಮ‌ ಅಭ್ಯರ್ಥಿ. ಇವರನ್ನು ಗೆಲ್ಲಿಸಿದರೆ ನಾನೇ ಗೆದ್ದ ಹಾಗೆ. ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ ಎಂದು ನನ್ನ ಮತ್ತು ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳ ಎದುರು ಒಪ್ಪಿಕೊಂಡು ಹೋಗಿದ್ದ ಈತ ಆಮೇಲೆ ಉಲ್ಟಾ ಹೊಡೆದು ನಮ್ಮಿಬ್ಬರಿಗೂ ಮಾತು ತಪ್ಪಿದ್ದಾನೆ. ವಿನಯ್ ಗೆ ಬಿಜೆಪಿ ಕುಮ್ಮಕ್ಕು ಕೊಡುತ್ತಿದೆ. ಏಕೆಂದರೆ ಈತನ‌ ಸ್ಪರ್ಧೆಯಿಂದ ಲಾಭ ಆಗುವುದು ಬಿಜೆಪಿಗೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ಮುಖ್ಯಮಂತ್ರಿಯಾಗಿ ನನಗಿನ್ನೂ ಹೆಚ್ಚಿನ ಶಕ್ತಿ ಬರುತ್ತದೆ ಎಂದು ವಿನಯ್ ಕುಮಾರ್ ನನ್ನು ಸೋಲಿಸಲು ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!