ಮಾನವನ ಲೌಕಿಕ ಬದುಕಿನ ಬೆಳಕನ್ನು ಬೆಳಗಲು ದೇವಾಲಯಗಳ ಪಾತ್ರ ಬಹುಮುಖ್ಯ – ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ: ಮಾನವನ ಸರ್ವತೋಮುಖವಾದ ಲೌಕಿಕ ಬದುಕಿನ ಬೆಳಕನ್ನು ಬೆಳಗಲು ದೇವಾಲಯಗಳ ಪಾತ್ರ ಬಹುಮುಖ್ಯವಾದುದು ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹೊಸ ಕುಂದುವಾಡದಲ್ಲಿರುವ ಶ್ರೀ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಗಣೇಶ, ಅಯ್ಯಪ್ಪಸ್ವಾಮಿ, ಷಣ್ಮುಖ, ಆಂಜನೇಯ, ನವಗ್ರಹಗಳ ಪ್ರತಿಷ್ಠಾಪನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮ ಮತ್ತು ದೇವರು ಎರಡು ಕೂಡ ಮಾನವನ ಲೌಖಿಕ ಬದುಕನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯುವ ಎರಡು ಸಾಧನಗಳೆಂದರೆ ತಪ್ಪಿಲ್ಲ. ದೇವಾಲಯಗಳಲ್ಲಿ ಸಿಗುವ ಶಾಂತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಲ್ಲೊಂದು ಸಕಾರಾತ್ಮಕ ಶಕ್ತಿ ಇರುತ್ತದೆ ಎಂದು ತಿಳಿಸಿದರು.
ಮೂರ್ತಿ ಪ್ರತಿಷ್ಠಾಪನೆ ದಿನವೇ ಇಂದು ಯುವಕರು ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿರುವುದು ನಿಮ್ಮ ಭಕ್ತಿಯನ್ನು ತೋರಿಸುತ್ತದೆ. ಪ್ರಾಮಾಣಿದಿಂದ ನೀವು ಬದುಕಿದ್ದೇ ಆದರೆ ಅಯ್ಯಪ್ಪ ಸದಾ ನಿಮ್ಮ ಅಂತರಂಗದಲ್ಲಿ ಬೆಳಗುತ್ತಿರುತ್ತಾನೆ. ಮಕರ ಜ್ಯೋತಿ ಬಗ್ಗೆ ಕೆಲವೊಂದು ಅಭಿಪ್ರಾಯವಿದೆ. ಆದರೆ, ಇಲ್ಲಿ ಎಲ್ಲರ ಬದುಕಲ್ಲಿ ಜ್ಯೋತಿಯೂ ಬೆಳಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಮುಖಂಡರು, ಗ್ರಾಮಸ್ಥರು ಭಾಗಿಯಾಗಿದ್ದರು.