ನವೆಂಬರ್ 11 ಕ್ಕೆ ಒನಕೆ ಒಬವ್ವ ಜಯಂತಿ ಆಚರಣೆಗೆ ಸರ್ಕಾರ ಆದೇಶ
ದಾವಣಗೆರೆ: ಒನಕೆ ಓಬವ್ವ ಜಯಂತಿಯನ್ನು ನ.೧೧ ರಂದು ರಾಜ್ಯಾದ್ಯಂತ ಆಚರಿಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಆದೇಶ ಹೊರಡಿಸಿದೆ.
ಒನಕೆ ಓಬವ್ವ ೧೮ ನೇ ಶತಮಾನದಲ್ಲಿ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಪ್ಪನ ಹೆಂಡತಿ. ಆಕೆಯ ಹೆಸರು ಚಿತ್ರದುರ್ಗದ ಇತಿಹಾದಲ್ಲಿ ಮರೆಯಲಾಗದ್ದು, ಓಬವ್ವನನ್ನು ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಚಿತ್ರದುರ್ಗದ ಮೇಲೆ ಹೈದರಾಲಿ ಸೈನ್ಯ ಆಕ್ರಮಣ ನಡೆಸಿದಾಗ ಓಬವ್ವ ಒನಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಶತ್ರು ಸೈನ್ಯವನ್ನು ಸದೆಬಡೆದಿದ್ದಳು. ಕೊನೆಯಲ್ಲಿ ಎದುರಾಳಿ ಬೆನ್ನಿಗೆ ಹಾಕಿದ ಚೂರಿಯಿಂದ ಆಕೆ ಬಲಿಯಾದಳು. ಈ ಇತಿಹಾಸದ ಹಿನ್ನೆಲೆಯಲ್ಲಿ ಓಬವ್ವನ ಜಯಂತಿ ಆಚರಣೆಗೆ ಮುಂದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಆಚರಣೆ ಮಾಡುವಂತೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ ನಿರ್ದೇಶಿಸಿದ್ದಾರೆ.