ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಜೆಡಿಎಸ್‌ಗೆ ಮಾತ್ರ: ಮನ್ಸೂರ್ ಅಲಿ
ದಾವಣಗೆರೆ: ಪಂಚರಾಜ್ಯಗಳ ಫಲಿತಾಂಶ ಗಮನಿಸಿದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿಸುವ ಶಕ್ತಿ ಇರುವುದು ಕೇವಲ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಮಾತ್ರ ಎಂದು ಜೆಡಿಎಸ್ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಯೂ.ಎಂ. ಮನ್ಸೂರ್ ಅಲಿ ಅಭಿಪ್ರಾಯಿಸಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷ ಎನ್ನುವ ಹಾಗೆ ಆಗುತ್ತದೆ. ಅದೇ ರೀತಿ ಬಿಜೆಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರ ಪಡೆದರು ಹಿಂದಿನ ಚುನಾವಣೆಯಲ್ಲಿ ಪಡೆದದ್ದಕ್ಕಿಂತ ಅತಿ ಕಡಿಮೆ ಸೀಟುಗಳನ್ನು ಗೆದ್ದು ಬೀಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಪಂಜಾಬ್‌ನಲ್ಲಿ ಗೆಲುವು ಪಡೆದಂತಹ ಆಮ್ ಆದ್ಮಿ ಪಕ್ಷದಂತೆ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದು ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನವೇ ಇಲ್ಲ. ಈ ದಿಕ್ಕಿನಲ್ಲಿ ಮುಂದಿನ ದಿನಗಳಲ್ಲಿ ಮತದಾರರ ಮನಗೆಲ್ಲುವ ಕೆಲಸ ಜೆಡಿಎಸ್ ಪಕ್ಷ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.