ಮಹರಾಷ್ಟ್ರ ಸರ್ಕಾರಿ ನೌಕರರಿಗೆ ಒಪಿಎಸ್ ಸಮಾನದ ಸೌಲಭ್ಯ: ಮುಷ್ಕರ ವಾಪಾಸ್
ಮುಂಬೈ: ಹೊಸ ಪಿಂಚಣಿ ವ್ಯವಸ್ಥೆಯ(ಎನ್‌ಪಿಎಸ್) ಭಾಗವಾಗಿರುವ ನೌಕರರಿಗೂ ಒಪಿಎಸ್‌ಗೆ ಸಮಾನವಾದ ಹಣಕಾಸು ಸೌಲಭ್ಯಗಳನ್ನು ವಿಸ್ತರಿಸಲು ರಾಜ್ಯ ಸರ್ಕಾರ ‘ತಾತ್ವಿಕವಾಗಿ’ ಒಪ್ಪಿಕೊಂಡಿದೆ ಎಂದು ಮುಷ್ಕರ ನಿರತ ಒಕ್ಕೂಟಗಳ ಸಮನ್ವಯ ಸಮಿತಿಯ ಸಂಚಾಲಕ ವಿಶ್ವಾಸ್ ಕಾಟ್ಕರ್ ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದ ಮಹಾರಾಷ್ಟ್ರ ಸರ್ಕಾರಿ ನೌಕರರು ಸೋಮವಾರ ಹಿಂತೆಗೆದುಕೊಂಡಿದ್ದಾರೆ.
ನೌಕರರ ಸಂಘದ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಇಂದು ನಡೆದ ಮಾತುಕತೆ ಯಶಸ್ವಿಯಾಗಿದ್ದು, ಮುಸ್ಕರ್ ವಾಪಸ್ ಪಡೆಯುತ್ತಿರುವುದಾಗಿ ಯೂನಿಯನ್ ಮುಖಂಡರೊಬ್ಬರು ತಿಳಿಸಿದ್ದಾರೆ.
2005ರಲ್ಲಿ ಸ್ಥಗಿತಗೊಂಡಿದ್ದ ಒಪಿಎಸ್ ಅನ್ನು ಮತ್ತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾರ್ಚ್ 14ರಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರು.
ಮುಷ್ಕರ ನಿರತ ನೌಕರರು ಹಿಮಾಚಲ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿರುವ ಕಾಂಗ್ರೆಸ್ ಆಡಳಿತದ ಸರ್ಕಾರಗಳ ಉದಾಹರಣೆಯನ್ನು ನೀಡಿದ್ದಾರೆ.
ನಾವು ನಿವೃತ್ತಿಯ ನಂತರ ಯೋಗ್ಯ ಜೀವನಕ್ಕೆ ಅರ್ಹರಾಗಿದ್ದೇವೆ. ನಮಗೆ ಸಾಮಾಜಿಕ ಭದ್ರತೆ ಬೇಕು. ಹಳೆ ಪಿಂಚಣಿ ಯೋಜನೆಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು. ಮಹಾರಾಷ್ಟ್ರ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ(ಮೆಸ್ಮಾ) ಹೇರಿದರೆ ನಾವು ಹೆದರುವುದಿಲ್ಲ. ಸರ್ಕಾರ ಏನು ಬೇಕಾದರೂ ಮಾಡಲಿ, ನಮ್ಮ ಬೇಡಿಕೆಗೆ ನಾವು ದೃಢವಾಗಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರು ಈ ಹಿಂದೆ ಹೇಳಿದ್ದರು.