ಪದವಿ ವಿದ್ಯಾರ್ಥಿಗಳಿಗೆ ಎರಡು ಡೋಸ್ ಲಸಿಕೆ ನಂತರ ಪರೀಕ್ಷೆಗೆ ಒತ್ತಾಯಿಸಿ AIDSO ಪ್ರತಿಭಟನೆ

ದಾವಣಗೆರೆ : ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದಂತೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಡೋಸ್ ಉಚಿತ ಲಸಿಕೆ ನೀಡುವವರೆಗೂ ಆಫ್ ಲೈನ್‌ತರಗತಿ ಮತ್ತು ಪರೀಕ್ಷೆಗಳನ್ನು ನಡೆಸಬಾರದು ಎಂದು ಆಗ್ರಹಿಸಿ ಎಐಡಿಎಸ್‌ಓ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸಿದರು.
ಸುಮಾರು ಎರಡು ವಾರಗಳಿಂದ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೊಮ ಹಾಗೂ ಫಾರ್ಮಸಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸರ್ಕಾರಕ್ಕೆ ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ಎಂದು ಆಗ್ರಹಿಸುತ್ತಿದ್ದಾರೆ. ಹಲವು ರೀತಿಯಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರಕ್ಕೆ ತಟ್ಟುವಂತೆ ಮಾಡಲು ಪ್ರಯತ್ನ ನಡೆದಿದ್ದರೂ ಇದುವರೆಗೆ ಸರ್ಕಾರದಿಂರ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದು ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ನಮ್ಮ ಬೇಡಿಕೆಯನ್ನು ಈಡೇರಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿ ದಾವಣಗೆರೆ ವಿವಿಯ ಕುಲಸಚಿವೆ (ಪರೀಕ್ಷಾಂಗ) ಡಾ. ಹೆಚ್. ಅನಿತಾ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಅವರು ಈಗ ಹೊರಡಿಸಿರುವ ಪರೀಕ್ಷಾ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಓನ ಸಂಘಟನಾಕಾರರಾದ ಪುಷ್ಪ ಮತ್ತು ಇಸ್ಮಾಯಿಲ್, ಸ್ನಾತಕೋತ್ತರ ವಿದ್ಯಾರ್ಥಿಗಳಾದ ಉದಯ್ ಕುಮಾರ್, ಶಿವಕುಮಾರ್, ಪ್ರೀತಮ್, ತಿಪ್ಪೇಶ್, ಗಿರಿಶ್, ದಿನೇಶ್ ಹಾಗು ಮತ್ತಿತರರಿದ್ದರು.