ಕರುನಾಡಿನ ಗಣ್ಯರಿಗೆ ಪದ್ಮ ಪ್ರಶಸ್ತಿ: ಸಾಧಕರಿಗೆ ಅಭಿನಂದನೆಯ ಮಹಾಪೂರ
ಬೆಂಗಳೂರು: ರಾಜಕೀಯ, ಸಾಹಿತ್ಯ, ಸಮಾಜಸೇವೆ, ಸಾರ್ವಜನಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಪ್ರತಿಷ್ಠಿತ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಗಣ್ಯರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಕರ್ನಾಟಕದ ಹೆಮ್ಮೆಯ ಸಾಧಕರಿಗೆ
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಎರಡನೇ ಅತ್ಯನ್ಯುತ ನಾಗರಿಕ ಪ್ರಶಸ್ತಿ ಎನಿಸಿದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ಹಾಗೂ ತಮ್ಮ ಸರಳತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ, ಸಮಾಜಸೇವೆಗಾಗಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪಡೆದ ಸುಧಾಮೂರ್ತಿ ಸೇರಿದಂತೆ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ..
ಕನ್ನಡನಾಡಿನ ಹೆಮ್ಮೆಯ ಸಾಧಕರಿಗೆ ಸಂದ ಹೆಮ್ಮೆಯ ಗೌರವ.
ಪದ್ಮ ವಿಭೂಷಣ ಪ್ರಶಸ್ತಿ ಭೂಷಿತರಾದ ಸನ್ಮಾನ್ಯ ಎಸ್.ಎಂ. ಕೃಷ್ಣ ಜೀ ಅವರು ಹಾಗೂ ಪದ್ಮ ಭೂಷಣ ಭೂಷಿತರಾದ ಮಾನ್ಯ ಶ್ರೀ ಎಸ್.ಎಲ್ ಭೈರಪ್ಪನವರು ಮತ್ತು ಶ್ರೀಮತಿ ಸುಧಾಮೂರ್ತಿ ಅವರು, #PadmaAwards #PeoplesPadma pic.twitter.com/1j5tvHhasL
— Dr. Murugesh R Nirani (@NiraniMurugesh) January 25, 2023
ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಇಂಜಿನಿಯರಿಂಗ್), ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಶಾ ರಶೀದ್ ಅಹಮದ್ ಕ್ವಾದ್ರಿ (ಕಲೆ), ಸುಬ್ಬರಾಮನ್ (ಪುರಾತತ್ವ ಶಾಸ್ತ್ರ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ರಾಜ್ಯದ ಗರಿಮೆಯನ್ನು ಹೆಚ್ಚಿಸಿದೆ ಎಂದು ಬಣ್ಣಿಸಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಐಟಿಬಿಟಿ ಕ್ಷೇತ್ರಕ್ಕೆ ಸಾಕಷ್ಟು ಮನ್ನಣೆ ನೀಡಿ, ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಳ್ಳಲು ಕೃಷ್ಣ ಅವರ ದೂರದೃಷ್ಟಿ ಸಾಕಷ್ಟಿತ್ತು. ಜೊತೆಗೆ ವಿಧಾನಸಭೆಯ ಸಭಾಪತಿ, ವಿವಿಧ ಖಾತೆಗಳನ್ನು ಹೊಂದಿದ್ದ ಅವರು ರಾಜ್ಯದ ಮಟ್ಟಿಗೆ ಓರ್ವ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಅಂತಹ ಮೇರು ವ್ಯಕ್ತಿತ್ವ ಹೊಂದಿದ್ದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸುಧೀರ್ಘ ಸೇವೆಯನ್ನು ಗುರುತಿಸಿ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ಸಮಸ್ತ ಕನ್ನಡಿಗರಿಗೆ ಸಿಕ್ಕ ಗೌರವ ಎಂದು ಹೇಳಿದ್ದಾರೆ.
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ಪರ್ವ ಸೇರಿದಂತೆ ಅನೇಕ ಹೆಸರಾಂತ ಕಾದಂಬರಿಗಳನ್ನು ಬರೆದು ಮನೆಮಾತಾಗಿರುವ ಹೆಸರಾಂತ ಸಾಹಿತಿ ಎಸ್.ಎಲ್. ಬೈರಪ್ಪ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದು ಸೂಕ್ತವಾಗಿದೆ ಎಂದು ನಿರಾಣಿ ಅವರು ಹೇಳಿದ್ದಾರೆ.
ತಮ್ಮ ಸರಳತೆಯ ಕಾರಣದಿಂದಾಗಿ ಕರ್ನಾಟಕ ಮಾತ್ರವಲ್ಲದೆ ದೇಶ- ವಿದೇಶಗಳಲ್ಲೂ ಹೆಸರವಾಸಿಯಾಗಿರುವ ಸಾಹಿತಿ ಹಾಗೂ ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡಿರುವ ಸುಧಾ ಮೂರ್ತಿ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಧಾ ಮೂರ್ತಿ ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ತನ್ನ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ, ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿದ್ದಾರೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಾಯಿಭಾಷೆ, ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜನೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ ಹಣ, ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿದ್ದಾರೆ.
ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಖಾದರ್ ವಲ್ಲಿ ದೂಡೇಕುಲ, ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯ ಕಲೆಯ (ಜಾನಪದ ನೃತ್ಯ) ನರ್ತಕಿ ರಾಣಿ ಮಾಚಯ್ಯ ಪದ್ಮಶ್ರೀ ಹಾಗೂ ಸಂಗೀತ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರದ ಮುನಿವೆಂಕಟಪ್ಪ ಅವರಿಗೂ ಪದ್ಮಶ್ರೀ ಪ್ರಶಸ್ತಿ ಬಂದಿರುವುದಕ್ಕೆ ಸಚಿವ ನಿರಾಣಿ ಅವರು ಅಭಿನಂದನೆ ಹೇಳಿದ್ದಾರೆ.
ಕೈಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಭಾರತದ ಕೀರ್ತಿಪಾತಕಿಯನ್ನು ವಿದೇಶಗಳಲ್ಲೂ ಹೆಚ್ಚಿಸಿದ ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷರು ಹಾಗೂ ಪ್ರಸಕ್ತ ವರ್ಷ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕುಮಾರ್ ಮಂಗಳಂ ಬಿರ್ಲಾ ಅವರಿಗೂ ನಿರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.