PayPal:ಜಿಎಂಐಟಿ ವಿದ್ಯಾರ್ಥಿನಿಗೆ ಪೇಪಾಲ್ ಕಂಪನಿಯ ವತಿಯಿಂದ ವಾರ್ಷಿಕ 34.4 ಲಕ್ಷ ಸ್ಯಾಲರಿ ಆಫರ್
ದಾವಣಗೆರೆ: (PayPal) ನಗರದ ಪ್ರತಿಷ್ಠಿತ ಜಿ ಎಮ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ 2024ನೇ ಸಾಲಿನ ವಿದ್ಯಾರ್ಥಿನಿ ಕುಮಾರಿ ಷಷ್ಠಿ ಡಿಬಿ, ಇತ್ತೀಚಿಗೆ ನಡೆದ ಪೇಪಾಲ್ ಕಂಪನಿಯ ಸಂದರ್ಶನ ಪ್ರಕ್ರಿಯೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಸ್ಥಾನಕ್ಕೆ, ವರ್ಷಕ್ಕೆ 34.4 ಲಕ್ಷಗಳ ಆಫರ್ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಾರಿ ಷಷ್ಠಿ ಡಿಬಿ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುತ್ತಾ, ವಿವಿಧ ತಾಂತ್ರಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ. ಹ್ಯಾಕಥಾನ್ ಸ್ಪರ್ಧೆಯಲ್ಲೂ ಸಹ ಅನೇಕ ಬಾರಿ ಭಾಗವಹಿಸಿ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದರು. ಇತ್ತೀಚಿಗೆ ಪೇಪಾಲ್ ನಡೆಸಿದ ಎಲ್ಲಾ ಮೂರು ತಾಂತ್ರಿಕ ಸಂದರ್ಶನ ಸುತ್ತುಗಳಲ್ಲೂ ತಾಂತ್ರಿಕ ಕೌಶಲ್ಯ ಪ್ರದರ್ಶಿಸಿ ಆಯ್ಕೆಯಾದ ವಿದ್ಯಾರ್ಥಿನಿಯಾಗಿದ್ದಾರೆ.
ಕಂಪನಿಯು ಈ ವಿದ್ಯಾರ್ಥಿನಿಗೆ ಇದೇ ಅಕ್ಟೋಬರ್ 21ನೇ ಸೋಮವಾರದಂದು ಚೆನ್ನೈನ ಪೇಪಾಲ್ ಕಂಪನಿಗೆ ಬಂದು ಸೇರಲು ಸೂಚನೆಯನ್ನು ನೀಡಿತ್ತು. ಅದೇ ರೀತಿ ವಿದ್ಯಾರ್ಥಿನಿಯು ಯಶಸ್ವಿಯಾಗಿ ಎಲ್ಲಾ ಔಪಚಾರಿಕ ಪ್ರಕ್ರಿಯೆಯನ್ನು ಮುಗಿಸಿ, ಇಂದು ಕಂಪನಿಯಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದಾರೆ.
ಜಿಎಂ ತಾಂತ್ರಿಕ ಮಹಾವಿದ್ಯಾಲಯ ಮತ್ತು ಜಿಎಂ ವಿಶ್ವವಿದ್ಯಾಲಯದ ಪರವಾಗಿ ಕುಮಾರಿ ಷಷ್ಠಿ ಡಿಬಿ ಮತ್ತು ಅವರ ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸುತಿದ್ದೇವೆ.
ಕಾಲೇಜಿನ ಚೇರ್ಮನ ಮತ್ತು ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಶ್ರೀ ಜಿಎಂ ಲಿಂಗರಾಜು, ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಎಸ್ ಆರ್ ಶಂಕಪಾಲ್, ಉಪಕುಲಪತಿಗಳಾದ ಡಾ ಹೆಚ್ ಡಿ ಮಹೇಶಪ್ಪ, ರಿಜಿಸ್ಟರ್ ಡಾ ಬಿ ಎಸ್ ಸುನಿಲ್ ಕುಮಾರ್, ಆಡಳಿತಾಧಿಕಾರಿ ಶ್ರೀ ವೈ ಯು ಸುಭಾಷ್ ಚಂದ್ರ ವಿದ್ಯಾರ್ಥಿನಿಯ ಮುಂದಿನ ಭವಿಷ್ಯಕ್ಕೆ ಶುಭ ಕೋರಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ, ಉತ್ತಮ ನಡತೆ ಮತ್ತು ಕೌಶಲ್ಯತೆಯನ್ನು ಹೊಂದಿದ್ದರೆ ಉನ್ನತ ಮಟ್ಟಕ್ಕೆ ಹೋಗಬಹುದೆಂಬುದಕ್ಕೆ ಒಂದು ಉತ್ತಮ ಉದಾಹರಣೆ ಎಂದು ತಿಳಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ ವೀರಪ್ಪ ಬಿ ಎನ್, ವಿಭಾಗದ ಎಲ್ಲಾ ಅಧ್ಯಾಪಕ ವರ್ಗದವರು ಕುಮಾರಿ ಷಷ್ಠಿ ಡಿಬಿ ಅವರ ಮುಂದಿನ ಭವಿಷ್ಯಕ್ಕೆ ಶುಭಕೋರಿದ್ದಾರೆ.