ಪೇಟಿಎಂ ಆಧಿಕಾರಿ ಎಂದು ಬೆಸ್ಕಾಂ ನೌಕರನಿಗೆ 73 ಸಾವಿರ ವಂಚನೆ
ದಾವಣಗೆರೆ: ಬೆಸ್ಕಾಂ ನೌಕರನೊಬ್ಬನಿಗೆ ಪೇಟಿಯಂ ಕಂಪನಿಯ ಅಧಿಕಾರಿಯೆಂದು ನಂಬಿಸಿ 73 ಸಾವಿರ ರೂ., ಆನ್ ಲೈಮ್ ಮೂಲಕ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಸ್ಕಾಂ ನೌಕರರಾಗಿರುವ ಎನ್. ತೌಸಿಪ್ ವಂಚನೆಗೊಳಗಾದವರು. ಇವರು ಪೇಟಿಯಂ ಮೂಲಕ ತಮ್ಮ ಮೊಬೈಲ್ ನಂಬರ್ ಗೆ ರೀಚಾರ್ಜ್ ಮಾಡಿಕೊಂಡಿದ್ದು, ಆದರೆ, ಅದು ರಿಚಾರ್ಜ್ ಆಗದ ಕಾರಣ ಗೂಗಲ್ ನಲ್ಲಿ ಹುಡುಕಿ ಪೇಟಿಯಂ ಕಸ್ಟಮರ್ ಕೇರ್ ನಂಬರ್ ತೆಗೆದುಕೊಂಡು ಫೋನಾಯಿಸಿದ್ದಾರೆ. ಆಗ ಅವರು ಪರಿಶೀಲಿಸಿದ ನಂತರ ಕರೆ ಮಾಡುವುದಾಗಿ ಗ್ರಾಹಕ ಅಧಿಕಾರಿ ತಿಳಿಸಿದ್ದಾನೆ.
ನಂತರ ಮರುದಿನ ಅನಾಮಧೇಯ ವ್ಯಕ್ತಿ ಕರೆ ಮಾಡಿ ತಾನು ಪೇಟಿಯಂ ಗ್ರಾಹಕ ಪ್ರತಿನಿಧಿಯೆಂದು ಹೇಳಿಕೊಂಡು ಯಾವುದೊ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಿ, ಅದರಲ್ಲಿ ಬರುವ ಓಟಿಪಿ ಪಡೆದಿದ್ದಾನೆ. ತೌಸಿಪ್ ಗೆ ತಾನು ಮೋಸ ಹೋಗುತ್ತಿರುವ ಬಗ್ಗೆ ಸುಳಿವು ಸಿಗದೆ ಅವರು ಓಟಿಪಿ ಹೇಳಿದ್ದಾರೆ. ನಂತರ ಬ್ಯಾಂಕ್ ಖಾತೆಯಿಂದ ಸಾಲಾಗಿ ಒಟ್ಟು 73 ಸಾವಿರ ರೂ., ಹಣ ಕಡಿತಗೊಂಡಾಗ ತೌಸಿಪ್ ಗೆ ತಾವು ವಂಚನೆಗೊಳಗಾಗಿರುವುದು ತಿಳಿದು ಬಂದಿದ್ದು, ಇಲ್ಲಿನ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.