PDS RICE: ನ್ಯಾಯಬೆಲೆ ಅಕ್ಕಿ ಕಾಳಸಂತೆಗೆ.? ಟ್ವಿಸ್ಟ್ ನೀಡಿದ ವೈರಲ್ ವಿಡಿಯೋ ತನಿಖೆ!

ದಾವಣಗೆರೆ: (PDS Rice) ಮಲೆಬೆನ್ನೂರು: ಬಡವರ ಪಾಲಿನ ಅನ್ನ ಕಳ್ಳರ ಪಾಲಾಗುತ್ತಿದೆಯೇ? ಹರಿಹರ ತಾಲ್ಲೂಕಿನ ವಾಸನ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿತರಿಸಬೇಕಿದ್ದ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಸಾಗಿಸುವ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವೈರಲ್ ಆದ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಪಡಿತರ ಸಾಗಾಣಿಕೆ ಗುತ್ತಿಗೆದಾರ ಹಾಗೂ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಿನಾಂಕ 17/04/2025 ರಂದು ರಾತ್ರಿ ವೇಳೆ ವಾಸನ ಗ್ರಾಮದ ಬಳಿ ಕೆಎ-17/ಎಬಿ-1423 ಲಾರಿಯಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿದ್ದಾಗ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಲಾರಿಯಲ್ಲಿ 50 ಕೆ.ಜಿ ತೂಕದ 361 ಚೀಲಗಳ ಅಕ್ಕಿ ಪತ್ತೆಯಾಗಿದೆ. ಆದರೆ, ಚಾಲಕನ ಬಳಿ ಯಾವುದೇ ಸೂಕ್ತ ದಾಖಲೆಗಳಿರಲಿಲ್ಲ. ವಿಚಾರಣೆ ನಡೆಸಿದಾಗ, ಈ ಅಕ್ಕಿಯನ್ನು ವಾಸನ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಆದರೆ, ಕಥೆಗೆ ಟ್ವಿಸ್ಟ್ ಸಿಕ್ಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಿಂದ! ಈ ಲಾರಿಯಲ್ಲಿ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬೇರೆಡೆಗೆ ಸಾಗಿಸಲಾಗುತ್ತಿತ್ತು ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಹರಿಹರ ತಹಸೀಲ್ದಾರ್ ಗುರುಬಸವರಾಜ್ ಸೂಚನೆ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ವಾಸನ ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರಿಗೆ ಏಪ್ರಿಲ್ ತಿಂಗಳ ಪಡಿತರ ಅಕ್ಕಿ ತಲುಪಿಲ್ಲ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಇದರಿಂದ ಅನುಮಾನಗಳು ಮತ್ತಷ್ಟು ಬಲಗೊಂಡಿವೆ.
ಹರಿಹರ ತಾಲ್ಲೂಕಿನ ಆಹಾರ ನಿರೀಕ್ಷಕ ಎಸ್.ಬಿ ಶಿವಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ಗುತ್ತಿಗೆದಾರ ಹಾಗೂ ಲಾರಿ ಮಾಲೀಕ ಶಶಿಧರ್ ಹೆಚ್.ಎಂ ಹಾಗೂ ಲಾರಿ ಚಾಲಕನ ವಿರುದ್ಧ ಮಲೆಬೆನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ತನಿಖಾಧಿಕಾರಿ ಪಿಎಸ್ಐ ಪ್ರಭು ಡಿ ಕೆಳಗಿನಮನಿ, “ವೈರಲ್ ವಿಡಿಯೋ ಹಾಗೂ ಆಹಾರ ಇಲಾಖೆಯ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅಕ್ಕಿ ಕಾಳಸಂತೆಗೆ ಸಾಗಿಸಲಾಗುತ್ತಿತ್ತೇ ಅಥವಾ ಬೇರೆ ಯಾವುದೇ ಉದ್ದೇಶವಿತ್ತೇ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುವುದು” ಎಂದು ತಿಳಿಸಿದ್ದಾರೆ.
ಬಡವರ ಹೊಟ್ಟೆ ತುಂಬಿಸಬೇಕಾದ ಪಡಿತರ ಅಕ್ಕಿ ಅಕ್ರಮ ದಂಧೆಯ ಪಾಲಾಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಈ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಅಕ್ರಮದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.