Pds Rice: ಭರ್ಜರಿ ಭೇಟೆಯಾಡಿದ ಎಸ್ ಪಿ ರಿಷ್ಯಂತ್ ತಂಡ: 37 ಟನ್ ಪಡಿತರ ಅಕ್ಕಿ, 2 ಲಾರಿ ವಶ

ದಾವಣಗೆರೆ: ವಿದ್ಯಾನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಆರೋಪಿಗಳಿಂದ ₹ 7,56 ಲಕ್ಷ ಮೌಲ್ಯದ 37,840 ಕೆಜಿ ಪಡಿತರ ಅಕ್ಕಿ ಮತ್ತು ಸಾಗಾಟಕ್ಕೆ ಬಳಸಿದ್ದ 18 ಲಕ್ಷ ರೂ ಬೆಲೆ ಬಾಳುವ ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಎನ್.ಹೆಚ್-4 ಬೈಪಾಸ್ ರಸ್ತೆಯಲ್ಲಿ ಹರಿಹರದಿಂದ ಚಿತ್ರದುರ್ಗಕ್ಕೆ ಭತ್ತ ಸಾಗಿಸುವುದಾಗಿ ಹೇಳಿ ಆರೋಪಿಗಳು ಅಕ್ರಮ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದರು. ಈ ಬಗ್ಗೆ ವಿದ್ಯಾನಗರ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಪಡಿತರ ಅಕ್ಕಿ ಸಾಗಿಸಲು ಲಾರಿಗಳಲ್ಲಿ ಭತ್ತ ಸಾಗಾಟ ಮಾಡುತ್ತಿರುದಾಗಿ ಹೇಳಿ ಪಡಿತರ ಅಕ್ಕಿಯನ್ನು ತುಂಬಿದ್ದರು. ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರೇಣುಕಾ ಜಿ ಮುಗಳಿಹಾಳ್ ಮತ್ತು ಆಹಾರ ನಿರೀಕ್ಷಕರಾದ ಶಬಾನ ಪರ್ವೀನ್ ಅವರೊಂದಿಗೆ ಲಾರಿಗಳನ್ನು ಪರಿಶೀಲನೆ ನಡೆಸಿ ಅಕ್ರಮ ನಡೆಸಿರುವುದು ಖಚಿತವಾದ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಪಡಿತರ ಅಕ್ಕಿ ರಾಣೇಬೆನ್ನೂರಿನಿಂದ ತುಮಕೂರಿಗೆ ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.