ಪೆಗಾಸಸ್ ಸ್ಕ್ಯಾಮ್ : ಸುಪ್ರೀಂ ಕೋರ್ಟ್ ನಿಂದ ವಿಚಾರಣೆ
ನವದೆಹಲಿ: ದೇಶದಲ್ಲೇ ತಳ್ಳಣಗೊಡಿಸಿರುವ ಪೆಗಾಸಸ್ ಸ್ಪೈ ನಿಂದ ಪ್ರತಿಪಕ್ಷದ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಸೇರಿದಂತೆ 300 ಕ್ಕೂ ಅಧಿಕ ಮಂದಿಯ ಮೇಲೆ ಇಸ್ರೇಲಿ ಸ್ಪೈ ವೇರ್ ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಿರುವ ಆರೋಪಗಳನ್ನು ಒಳಗೊಂಡ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬರುವ ಗುರುವಾರ ವಿಚಾರಣೆ ನಡೆಸಲಿದೆ.
ಪೆಗಾಸಸ್ ಹಗರಣದ ಕುರಿತು ವಿಶೇಷ ತನಿಖೆಯನ್ನು ಕೋರಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವುಗಳ ವಿಚಾರಣೆ ಗುರುವಾರ ಆರಂಭವಾಗಲಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿಗಳ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಸೂರ್ಯ ಕಾಂತ್ ದ್ವಿಸದಸ್ಯ ಪೀಠದ ಎರಡನೇ ನ್ಯಾಯಾಧೀಶರಾಗಿದ್ದಾರೆ.
ಸರ್ಕಾರ ಯಾವುದೇ ರೀತಿಯ ಕಣ್ಗಾವಲು ನಡೆಸಲು ಸ್ಪೈ ವೇರ್ ಪರವಾನಗಿ ಪಡೆದಿದ್ದಾರೆಯೇ ಮತ್ತು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೈವೇರ್ ಬಳಸಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿ ಕುಮಾರ್, ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಮತ್ತು ವಕೀಲ ಎಂ.ಎಲ್ ಶರ್ಮಾ ಅರ್ಜಿ ಸಲ್ಲಿಸಿದ್ದಾರು.
ಜುಲೈ 19 ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ, ಪ್ರತಿಪಕ್ಷಗಳು ಪೆಗಾಸಸ್ ಹಗರಣದ ಕುರಿತು ಚರ್ಚೆ ನಡೆಸಲು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಲು ಒತ್ತಾಯಿಸುತ್ತಿವೆ.
ತನಿಖೆಯ ಬೇಡಿಕೆಗಳನ್ನು ತಳ್ಳಿಹಾಕಿರುವ ಒಕ್ಕೂಟ ಸರ್ಕಾರವು ತನ್ನ ಏಜೆನ್ಸಿಗಳಿಂದ ಯಾವುದೇ ಅನಧಿಕೃತ ಹಸ್ತಕ್ಷೇಪವಿಲ್ಲ ಎಂದು ಸಮರ್ಥಿಸಿಕೊಂಡಿದೆ. ನಿರ್ದಿಷ್ಟ ಜನರ ಮೇಲೆ ಸರ್ಕಾರದ ಗೂಢಚರ್ಯೆಗೆ ಸಂಬಂಧಿಸಿದ ಆರೋಪಗಳಿಗೆ ಯಾವುದೇ ನಿರ್ದಿಷ್ಟ ಆಧಾರವಿಲ್ಲ ಎಂದು ಹೇಳಿದೆ.
“ಪೆಗಾಸಸ್ ಗೂಢಚರ್ಯೆ ಹಗರಣವು ಗಂಭೀರ ಸಮಸ್ಯೆಯಲ್ಲ. ಐಟಿ ಸಚಿವರು ಈಗಾಗಲೇ ಉಭಯ ಸದನಗಳಲ್ಲಿ ಈ ವಿಷಯದ ಬಗ್ಗೆ ವಿವರವಾದ ಹೇಳಿಕೆಯನ್ನು ನೀಡಿದ್ದಾರೆ. ಸಮಸ್ಯೆಯಲ್ಲದ, ಗಂಭೀರವಲ್ಲದ ವಿಷಯದ ಮೇಲೆ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಪೆಗಾಸಸ್ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಇಬ್ಬರು ಒಕ್ಕೂಟ ಸರ್ಕಾರದ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಮಾಜಿ ಸಿಬಿಐ ಮುಖ್ಯಸ್ಥ ಉದ್ಯಮಿ ಅನಿಲ್ ಅಂಬಾನಿ ಮತ್ತು ಕನಿಷ್ಠ 40 ಪತ್ರಕರ್ತರು ಸೇರಿದಂತೆ ಪ್ರತಿಪಕ್ಷ ನಾಯಕರು ಇದ್ದಾರೆ ಎಂಬ ಆರೋಪವಿದೆ.