ಉಡುಪಿ ಪೇಜಾವರ ಶ್ರೀಗಳ ಪಾದ ಪೂಜೆ ಮಾಡಿದ ದಲಿತ ಮುಖಂಡ.

ದಾವಣಗೆರೆ:ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಮಂಗಳವಾರ ದಲಿತ ಮುಖಂಡ ಆಲೂರು ಲಿಂಗರಾಜ್ ಅವರ ಮನೆಗೆ ತೆರಳಿ ಪಾದಪೂಜೆ ಸ್ವೀಕರಿಸಿದರು. ಇಲ್ಲಿನ ಜಯ ನಗರದಲ್ಲಿರುವ ಆಲೂರು ಲಿಂಗರಾಜ್ ಅವರ ಮನೆಗೆ ಬೆಳಿಗ್ಗೆ ತೆರಳಿದ ಶ್ರೀ ಗಳನ್ನು ಲಿಂಗರಾಜ್ ದಂಪತಿ ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹಿರಿಯೂರಿನ ಆದಿ ಜಾಂಭವ ಮಠದ ಷಡಕ್ಷರಿ ಮುನಿದೇಶಿಕೇಂದ್ರ ಸ್ವಾಮೀಜಿ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಲೂರು ಲಿಂಗರಾಜ್, ಈ ರೀತಿಯ ಸಂದೇಶಗಳು ನಮ್ಮ ಸಮಾಜಕ್ಕೆ ಸಂತೋಷ ನೀಡಬೇಕು. ಈ ವ್ಯವಸ್ಥೆಗೆ ನಾವು ಕೂಡ ಹೊಂದಿಕೊಳ್ಳಬೇಕು. ಶ್ರೀಗಳು ನಮ್ಮ ಮನೆಗೆ ಬಂದು ಪಾದಪೂಜೆ ಸ್ವೀಕರಿಸಿರುವುದು ಸಂತೋಷವಾಗಿದೆ. ಸಮಾಜದಲ್ಲಿ ಈ ತರಹದ ಬದಲಾವಣೆಗಳು ಅಗತ್ಯವಾಗಿವೆ ಎಂದರು.

ಗುರುಗಳ ಶ್ರೀ ರಕ್ಷೆಯಿಂದ ಮಾಯಕೊಂಡ ಮೀಸಲು ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಟಿಕೇಟ್ ದೊರೆಯುವ ನಿರೀಕ್ಷೆ ಕೂಡ ಇದೆ. ಟಿಕೆಟ್ ದೊರೆತರೆ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಕ್ಷೇತ್ರದ ಜನರ ಅಭಿವೃದ್ಧಿಗೆ ಶ್ರಮಿಸುವುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
’’ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಹಿರಿಯ ಗುರುಗಳ ನೆರಳಿನಲ್ಲೇ ಬೆಳೆದ ನಾವು ದಲಿತರ ಕೇರಿಗಳಿಗೆ ಭೇಟಿ ನೀಡುವ ಸಾಮಾಜಿಕ ಕೆಲಸವನ್ನು ನಿರಂತರವಾಗಿ ಮುಂದುವರೆಸಿದ್ದೇವೆ. ಆದರೆ ಆ ಬಗ್ಗೆ ಹೆಚ್ಚು ಪ್ರಚಾರ ಆಗುತ್ತಿಲ್ಲ. ತೋರಿಕೆಗೆ ದಲಿತರ ಕೇರಿಗೆ ಭೇಟಿ ನೀಡುವುದೇ ಉದ್ಯೋಗವಾಗಬಾರದು. ಪಾದಪೂಜೆಗೆ ಯಾರು ಕರೆದರೂ ಹೋಗುತ್ತೇವೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 
                         
                       
                       
                       
                       
                       
                       
                      