ವೈಯಕ್ತಿಕ ವಿಚಾರಗಳನ್ನು ಮುಕ್ತವಾಗಿ ಬಗೆಹರಿಸಿಕೊಳ್ಳಬೇಕು. ಬಹಿರಂಗ ಹೇಳಿಕೆಗಳನ್ನು ನೀಡುವುದು ಶೋಭೆ ತರುವುದಿಲ್ಲ.
ದಾವಣಗೆರೆ :ಪಂಚಪೀಠಗಳಲ್ಲಿ ಒಂದಾದ ಉಜ್ಜೈನಿ ಪೀಠದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇದಾರ ಪೀಠದ ಜಗದ್ಗುರುಗಳು ತಮ್ಮ ಮಾತುಗಳನ್ನು ಹಿಂಪಡೆಯಬೇಕು ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹರಿಹರ ತಾಲ್ಲೂಕು ಶಿವನಹಳ್ಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕೇದಾರ ಪೀಠದ ಜಗದ್ಗುರು ಡಾ. ಭೀಮಾ ಶಂಕರಲಿಂಗ ಶಿವಾಚಾರ್ಯ ಸ್ವಾಮಿಜಿ ಅವರು `ಉಜ್ಜಯಿನಿ ಮೂಲ ಪೀಠ ಮಧ್ಯಪ್ರದೇಶದಲ್ಲಿದ್ದು, ಇದು ಓಡಿ ಬಂದ ಮಹಿಳೆಯಂತೆ’ ಎಂಬ ಹೇಳಿಕೆ ಹಾಗೂ ಸಂವಿಧಾನವನ್ನು ಕಾಲಿನಲ್ಲಿ ತುಳಿಯುತ್ತೇವೆ’ ಎಂಬ ಹೇಳಿಕೆಗಳು ಧರ್ಮ ಹಾಗೂ ದೇಶಕ್ಕೆ ಮಾಡಿದ ಅಪಮಾನ ಎಂದು ಹೇಳಿದರು.
ಸನಾತನ ಪಂಚ ಪೀಠಗಳ ಬಗ್ಗೆ ನಾಡಿನ ಉದ್ದಗಲಕ್ಕೂ ಇರುವ ಭಕ್ತರು ಜಾತಿ, ಪಂಥ ಮೀರಿ ಗೌರವ ಸಲ್ಲಿಸುತ್ತಿದ್ದಾರೆ. ಭಕ್ತಿಯಿಂದ ನಡೆದುಕೊಳ್ಳುತ್ತಾ ಬಂದಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಎಲ್ಲಾ ಪಂಚ ಪೀಠಗಳು ಒಂದೇ ಎಂಬ ಭಾವವನ್ನು ಭಕ್ತರು ತೋರಿಸುತ್ತಿದ್ದಾರೆ. ಜನ ಸಮಾನ್ಯರಲ್ಲಿಯೇ ಇಲ್ಲದ ರಾಗ, ದ್ವೇಷ, ಅಸೂಯೆ ಪೀಠಾಧಿಪತಿಗಳಲ್ಲಿ ಏಕೆ ಎಂದು ಪ್ರಶ್ನಿಸಿದರು?
ಪೀಠಾಧಿಪತಗಳು ನುಡಿಗಳು ಭಕ್ತರ ಬದುಕಿಗೆ ದಿಕ್ಸೂಚಿಯಾಗಿರಬೇಕು. ಅದರ ಬದಲು ಮತ್ತೊಂದು ಪೀಠಕ್ಕೆ ಅವಹೇಳನಕಾರಿಯಾಗಿ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆಯಲ್ಲ. ಮತ್ತೊಂದು ಪೀಠದ ಮೂಲ ಇರುವಿಕೆ ಬಗ್ಗೆ ಮಾತನಾಡುವ ನೈತಿಕ ಹಕ್ಕೂ ಅವರಿಗಿಲ್ಲ ಎಂದು ಹೇಳಿದರು.
ಕೇದಾರ ಪೀಠದ ಅಧಿಕಾರವನ್ನು ನೀವು ಉಳಿಸಿ, ಬೆಳೆಸಿಕೊಂಡಿರುವುದು ಸಂತೋಷ. ಆದರೆ ಮತ್ತೊಂದು ಪೀಠದ ಬಗ್ಗೆ ನೀವು ತಲೆ ಹಾಕಬಾರದು. ಉಜ್ಜೈನಿ ಪೀಠಕ್ಕಿರುವ ಲಕ್ಷಾಂತರ ಭಕ್ತ ಸಂಪತ್ತು ಬೇರೆ ಇಲ್ಲ. ಜನರು ಈಗ ಬುದ್ದಿವಂತರಾಗಿದ್ದಾರೆ. ಸುಳ್ಳುಗಳನ್ನು ನಂಬುವುದಿಲ್ಲ. ಭಕ್ತರ ಹೆಜ್ಜೆ ನೋಡಿ ಗುರುಗಳು ಸಾಗಬೇಕಾದ ಸೂಕ್ಷ್ಮ ಕಾಲ ಇದು. ಭಕ್ತರನ್ನು ದಿಕ್ಕು ತಪ್ಪಿಸುವ ಹೇಳಿಕೆಗೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಪೀಠಗಳ ಬಗ್ಗೆ ಆಂತರಿಕ ಕಲಹಗಳಿದ್ದರೆ ಮುಕ್ತವಾಗಿ ಕುಳಿತು ಬಗೆ ಹರಿಸಿಕೊಳ್ಳಬೇಕು. ಬಹಿರಂಗ ವೇದಿಕೆಯಲ್ಲಿ ನೀಡುವ ಹೇಳಿಕೆಗಳು ಪೀಠಕ್ಕೆ ಶೋಭೆ ತರುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೊಟ್ಟೂರು ಜಾನುಕೋಠಿ ಶ್ರೀ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮುಷ್ಠೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಗಂಗಾಧರ ಸ್ವಾಮಿ ಕಂಬಾಳಿ ಮಠ ಉಪಸ್ಥಿತರಿದ್ದರು.