ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಡಾ|| ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯ ಜಯದೇವ ಪೆಟ್ರೋಲ್ ಬಂಕ್‌ನಲ್ಲಿ ಕಾಂಗ್ರೆಸ್ ಮಹಿಳಾ ಕಾರ್‍ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿತಾಬಾಯಿ ಮಾಲತೇಶ್ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನ ಮೇಲೆ ಸುಂಕ ದರವನ್ನು ಕಡಿಮೆ ಮಾಡಲಿ, ರಾಜ್ಯ ಸರ್ಕಾರಗಳು ಕೂಡ ಮಾಡಲಿ, ಇಲ್ಲದಿದ್ದರೆ ಜನತೆಗೆ ಬದುಕುವುದು ಬಹಳ ಕಷ್ಟವಾಗುತ್ತದೆ, ಪೆಟ್ರೋಲ್,ಡೀಸೆಲ್ ಬೆಲೆ ಹೆಚ್ಚಳವಾದ ಕೂಡಲೇ ಸಾಗಣೆ-ಸಾಗಾಟ ದರ ಹೆಚ್ಚಳವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಿವೆ ಎಂದು ದೂರಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ನರಕ ಸೃಷ್ಟಿಸುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ ನರೇಂದ್ರ ಮೋದಿ ಅಧಿಕಾರ ಮಾಡುತ್ತಿದ್ದಾರೆ. ಮೋದಿ ಈ ದೇಶದ ಜನರ ರಕ್ತ ಹೀರುತ್ತಿದ್ದಾರೆ. ಬೆಲೆ ಏರಿಕೆ ಮಾಡಿ ಜನರ ರಕ್ತ ಕುಡಿಯುತ್ತಿದ್ದಾರೆ. ತಿಗಣೆಯಂತೆ ಜನರ ರಕ್ತ ಹೀರುತ್ತಿರುವ ಮೋದಿಗೆ ನಾಚಿಕೆ ಆಗುವುದಿಲ್ಲವಾ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಮಾತನಾಡಿ ಭ್ರಷ್ಠಾಚಾರದ ವಿರುದ್ದ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿಯವರು ಅಪೌಷ್ಠಿಕ ಮಕ್ಕಳಿಗೆ ನೀಡುವ ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿರುವವರನ್ನು ಝೀರೋ ಟ್ರಾಫಿಕ್‌ನಲ್ಲಿ ಕರೆತಂದು ಮಂತ್ರಿ ಮಾಡುವ ಮೂಲಕ ಬಿಜೆಪಿ ನೈತಿಕತೆ ಏನು ಎಂಬುದು ತಿಳಿಯಲಿದೆ ಎಂದು ವ್ಯಂಗವಾಡಿದರು.
ಈ ಸಂದರ್ಭದಲ್ಲಿ ದ್ರಾಕ್ಷಾಯಣಮ್ಮ, ಟಿ.ಎಂ.ರಾಜೇಶ್ವರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗರತ್ನಮ್ಮ, ಪ್ರಧಾನ ಕಾರ್‍ಯದರ್ಶಿಗಳಾದ ಸುಷ್ಮಾಪಾಟೀಲ್, ಕವಿತಾ ಚಂದ್ರಶೇಖರ್, ಆಶಾಮುರುಳಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸುನಿತಾ ಭೀಮಣ್ಣ, ಸುವರ್ಣಮ್ಮ, ಮಂಗಳಮ್ಮ, ಲಕ್ಷ್ಮೀದೇವಿ ಅಣ್ಣೇಶ್ ನಾಯ್ಕ, ಇಂದ್ರಮ್ಮ, ಮೇಘಾ, ದೀಪಾ, ಜಯಮ್ಮ, ಸಂಗೀತಾ, ರತ್ನ ಆವರಗೆರೆ, ಹರಿಶ್ ಕೆ.ಎಲ್.ಬಸಾಪುರ ಮತ್ತಿತರರು ಭಾಗವಹಿಸಿದ್ದರು.