Plastic -Free : ಪ್ಲಾಸ್ಟಿಕ್ ಮುಕ್ತ ಕಾರ್ಯಗಾರ,ಮಕ್ಕಳು ಚಾಂಪಿಯನ್ ಆಗಬೇಕು ; ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ : Plastic -Free : ದೇಶದ ಭವಿಷ್ಯ ಮಕ್ಕಳು ಹಾಗೂ ಯುವ ಸಮುದಾಯದ ಮೇಲಿದೆ. ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರ, ಆರೋಗ್ಯ ಉಳಿಸಬೇಕಾದರೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಮಕ್ಕಳು ಇದರ ಚಾಂಪಿಯನ್‍ಗಳಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಧರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಅಮೃತ ವಿದ್ಯಾಲಯಂ ಸಹಯೋಗದಲ್ಲಿ ಸೋಮವಾರ ನಗರದ ಅಮೃತ ವಿದ್ಯಾಲಯಂ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನದಡಿ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಮತ್ತು ಆರೋಗ್ಯ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಹಲವಾರು ಯೋಜನೆ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಸಾಗರ ಮಿತ್ರ ಅಭಿಯಾನದಡಿ 5 ರಿಂದ 9ನೇ ತರಗತಿ ಮಕ್ಕಳನ್ನು ಬಳಸಿಕೊಂಡು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸಲು ಪಣತೊಡಲಾಗಿದೆ. ಸರ್ಕಾರದಿಂದ ಹಸಿ ಕಸ, ಒಣ ಕಸ ವಿಂಗಡಿಸಿ ಕೊಡಬೇಕೆಂಬ ಸುತ್ತೋಲೆ ಇದೆ.
ಆದರೂ ಸಾರ್ವಜನಿಕರು ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಿಲ್ಲ. ನಮ್ಮ ಮನೆ ಸುತ್ತ ಮುತ್ತ ಸರಿ ಇದ್ದರೆ ಸಾಕೆಂಬ ಮನಃಸ್ಥಿತಿ ಹಲವರಲ್ಲಿದೆ. ದಾವಣಗೆರೆ ನಗರದಲ್ಲ್ಲಿ ಸುಮಾರು 6 ರಿಂದ 6.5 ಲಕ್ಷ ಜನತೆ ಇದ್ದು, ಸ್ವಚ್ಛತೆಗೆ ಕೇವಲ 400 ಪೌರಕಾರ್ಮಿಕರಿದ್ದಾರೆ.
ಯಾರೇ ಆಗಲಿ ಕಸ ಅಥವಾ ಇತರೆ ತ್ಯಾಜ್ಯ ರಸ್ತೆ ಬದಿ ಎಲ್ಲೆಂದರಲ್ಲಿ ಎಸೆಯುವುದು ಕಂಡಾಗ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಹಾಗೆ ಮಾಡಲು ಆಗದಿದ್ದಲ್ಲಿ ಪ್ರಸ್ತುತ ಎಲ್ಲರೂ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಸುವರು. ಅಂಥಹ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಗಣೇಶ ವಿಗ್ರಹ ವಿಸರ್ಜನೆ ವೇಳೆ ಆಗುವ ತ್ಯಾಜ್ಯ ಕಡಿಮೆಗೊಳಿಸಿ ಪರಿಸರ ಸಂರಕ್ಷಿಸಬೇಕು. ಮುಂದಿನ ದಿನಗಳಲ್ಲಿ ರಸ್ತೆ ಬದಿಗಳಲ್ಲಿ ಕಸ ಎಸೆಯುವ ವ್ಯಕ್ತಿ ಮನೆ ಮುಂದೆ ಡಂಗೂರ ಒಡೆಯುವ ಕೆಲಸ ಮಾಡಲಿದ್ದೇವೆ ಎಂದ ಅವರು, ಮನೆಯಲ್ಲಿ ಬಳಸಿ ಬಿಸಾಡುವ ಏಕ ಬಳಕೆ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ಸಂಗ್ರಹಿಸಿ ವಾರಕ್ಕೊಮ್ಮೆ ಶಾಲೆ, ಕಾಲೇಜಗಳ ಮುಖೇನ ಸ್ಥಳೀಯ ಸಂಸ್ಥೆಗಳಿಗೆ ನೀಡಿ ಪರಿಸರ ಮಾಲಿನ್ಯ ತಪ್ಪಿಸಬೇಕು.
ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕಬೇಕಾದರೆ ಇಂತಹ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಕೆಲಸ ಮಾಡಬೇಕಾದರೆ ತೊಂದರೆ ಸಹಜ, ಅವುಗಳನ್ನು ನಿಭಾಯಿಸಿ ಯಶಸ್ಸು ಕಾಣಬೇಕು. ಇಂತಹ ಕೆಲಸ ತಮ್ಮ ಮನೆಗಳಿಂದಲೇ ಮೊದಲು ಆರಂಭವಾಗಬೇಕು. ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ನೀವೆಲ್ಲ ಚಾಂಪಿಯನ್ ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳು ಸಂಗ್ರಹಿಸಿ ತಂದಿದ್ದ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವನ್ನು ಸ್ವತಃ ಜಿಲ್ಲಾಧಿಕಾರಿಗಳೇ ಚೀಲಕ್ಕೆ ತುಂಬಿಕೊಂಡು ಪ್ಲಾಸ್ಟಿಕ್ ಮುಕ್ತ ಅಭಿಯಾನದಡಿ ಮಕ್ಕಳಿಗೆ ಜಾಗೃತಿ ಮೂಡಿಸಿದರು.
ಕಾರ್ಯಗಾರದಲ್ಲಿ ಡಿಡಿಪಿಐ ಕೊಟ್ರೇಶ್, ಅಮೃತ ವಿದ್ಯಾಲಯಂ ಶಾಲೆಯ ಪ್ರಾಂಶುಪಾಲರಾದ ಎನ್.ಸಿ.ವಿವೇಕ್, ಎನ್.ಪ್ರತಿಭಾ, ಪ್ರತೀಕ್ ಹಾಗೂ ವಿದ್ಯರ್ಥಿಗಳು ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.