ಪೋಲೀಸ್ ಕಂಟ್ರೋಲ್ ರೂಂ ರೋಲ್ ಮಾಡೆಲ್ ಇನ್ಸ್‌ಪೆಕ್ಟರ್ ತೇಜಾವತಿ
ದಾವಣಗೆರೆ: ಸಾಮಾನ್ಯವಾಗಿ ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎಂಬ ಮೆಚ್ಚುಗೆ ಮಾತು ಕಾಮನ್. ಆದರೆ ಇಲ್ಲೊಂದು ಇಲಾಖೆಯಲ್ಲಿ ಹೆಣ್ಣೊಬ್ಬಳು ತೆರೆ ಹಿಂದೆ ಒಂದು ಶಕ್ತಿಯಾಗಿ ಕರ್ತವ್ಯ ನಿರತರಾಗಿದ್ದಾರೆ.
ಹೌದು. ದಾವಣಗೆರೆ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂನ ರೋಲ್ ಮಾಡೆಲ್ ತೇಜಾವತಿಯೇ ಈ ಕಥಾ ನಾಯಕಿ. ಹೇಳಿ ಕೇಳಿ, ದಾವಣಗೆರೆ ಮಹಾ ನಗರ. ಅದರಲ್ಲೂ ಈಗ ಚುನಾವಣೆ ಕಾಲ. ರಾಜ್ಯ, ರಾಷ್ಟ್ರ ನಾಯಕರು ಇಲ್ಲಿಗೆ ಆಗಾಗ ದಾಳಿ ಇಕ್ಕುತ್ತಾರೆ. ಭದ್ರತೆಯಲ್ಲಿ ಲೋಪವಾಗಬಾರದು. ಮೈಯೆಲ್ಲ ಕಣ್ಣಾಗಿರಬೇಕು. ಎಲ್ಲ ಸಿಗ್ನಲ್‌ಗಳು, ವೈರ್ ಲೆಸ್ ಗಳ ವರ್ಕಿಂಗ್ ಸಿಸ್ಟಂ ನೋಡಿ ಕೊಳ್ಳಬೇಕು. ಹೀಗೆ ಹತ್ತಾರು ತಾಂತ್ರಿಕ ಕಾರ್ಯಗಳನ್ನು ಒಬ್ಬ ಮಹಿಳಾಧಿಕಾರಿಯಾಗಿ ನಿರ್ವಹಿಸುತ್ತಿದ್ದಾರೆ.
ಅನೇಕ ಸಂಕಷ್ಟದ ಸನ್ನಿವೇಶಗಳಲ್ಲಿ ಮಹಿಳೆಯರೇ ಹೆಚ್ಚು ಸಮಯಪ್ರಜ್ಞೆ ಹಾಗೂ ತಾಳ್ಮೆ ತೋರಿಸುತ್ತಾರೆ. ಈ ಬಗೆಯ ಚುರುಕುತನ ಮಹಿಳೆಯರಲ್ಲೇ ಹೆಚ್ಚು. ಇಂತಹ ಮಾತಿಗೆ ತೇಜಾವತಿ ಸಾಕ್ಷಿ. ಮೂಲತಃ ಬೆಣ್ಣೆ ನಗರಿಯವರಾದ ತೇಜಾವತಿ ಡಿಆರ್‌ಎಂ ಸೈನ್ಸ್ ಕಾಲೇಜಿನಲ್ಲಿ ಬಿಎಸ್ಸಿ (ಪಿಸಿಎಂ) ವ್ಯಾಸಂಗ ಮುಗಿಸಿದರು. 2007ರಲ್ಲಿ ವೈರ್ಲೆಸ್ ವಿಭಾಗದ ಪಿಎಸ್‌ಐ ಪರೀಕ್ಷೆ ಬರೆದರು. 2015ರಲ್ಲಿ ಪಿಐ ಆಗಿ ಬಡ್ತಿ ಪಡೆದರು. ಚಿತ್ರದುರ್ಗ, ದಾವಣಗೆರೆಯಲ್ಲಿ 10 ವರ್ಷ ವೈರಲೈಸ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ತೇಜಾವತಿ ಕಷ್ಟಪಟ್ಟು ಅಲ್ಲ. ತುಂಬಾ ಇಷ್ಟಪಟ್ಟು ಕೆಲಸ ಮಾಡುವ ಇಲಾಖೆ ಇದು. ಕೆಲಸದ ಒತ್ತಡ ತಪ್ಪಿದ್ದಲ್ಲ. ಕೆಲವೇ ಕ್ಷಣಗಳಲ್ಲಿ ಮೇಲಧಿಕಾರಿಗಳಿಗೆ ಮಾಹಿತಿ ನೀಡುವ ಜರೂರತ್ತು ಇವರನ್ನು ಹೈರಾಣು ಮಾಡುತ್ತದೆ. ಕೆಲವೊಮ್ಮೆ ಗಲಭೆಗಳ ಸಂದರ್ಭದಲ್ಲಿ ವೈರ್ಲೆಸ್ ಮೂಲಕ ಮಾಹಿತಿ ಕೊಡಬೇಕು. ಈ ದೃಷ್ಟಿಯಿಂದ ಗಟ್ಟಿ ಮಹಿಳೆ ತೇಜಾವತಿ. ಎಂಥದ್ದೆ ಕ್ಲಿಷ್ಟಕರ ಸಂದರ್ಭ ಎದುರಾದರೂ ಇವರ ಡೇರಿಂಗ್ ನೇಚರ್ ಮಾತ್ರ ಅದ್ಭುತ. ಗಲಭೆ ಸಂದರ್ಭದಲ್ಲಿ ಸಮಯ ಲೆಕ್ಕ ಹಾಕದೇ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಟ್ರಾಫಿಕ್ ಸೇರಿದಂತೆ ಎಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಸುವುದೇ ತಲೆ ನೋವಿನ ಸಂಗತಿ. ಒಂದೊಂದು ನಿಮಿಷವನ್ನೂ ವ್ಯರ್ಥ ಮಾಡದೇ ಎಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ಸಮಯ ಹಾಳು ಮಾಡುವಂತಿಲ್ಲ. ಒಟ್ಟಿನಲ್ಲಿ ಪ್ರತಿಕ್ಷಣವೂ ಯುದ್ಧದ ಕ್ಷಣದಂತೆ ಭಾಸವಾಗುತ್ತದೆ. ಇಂಥ ಸನ್ನಿವೇಶ ಮಹಿಳೆಗೆ ಒಂದು ರೀತಿ, ಪುರುಷರಿಗೆ ಇನ್ನೊಂದು ರೀತಿ ಎದುರಾಗುತ್ತದೆ. ಇಂಥ ವೇಳೆ ವಿಚಲಿತವಾಗದೇ ತುಂಬಾ ಕಾಳಜಿಯಿಂದ ಕೆಲಸ ಮಾಡಬೇಕು. ಈ ಮಾಹಿತಿ ಆಧರಿಸಿಯೇ ಬಂದೋ ಬಸ್ತ್ ಮಾಡಬೇಕಿದೆ.
ಕುಟುಂಬದಲ್ಲಿ ಒಬ್ಬ ಗೃಹಿಣಿಯಾಗಿ ಮತ್ತು ಕಚೇರಿಯಲ್ಲಿ ಒಬ್ಬ ಅಧಿಕಾರಿಯಾಗಿ ಕೆಲಸ ಮಾಡುವ ಚಾಲೇಂಜಿಂಗ್ ಜಾಬ್ ಇದು. ಇದನ್ನು ಸಮಾನವಾಗಿ ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ತೇಜಾವತಿಯವರಲ್ಲಿದೆ.