ಪೊಲೀಸ್ ಹೆಸರಲ್ಲಿ ದರೋಡೆ ಮಾಡಿದ್ರೆ ರಿಯಲ್ ಪೊಲೀಸ್ ಸುಮ್ನೆ ಬಿಡ್ತಾರಾ..?

ದಾವಣಗೆರೆ: ಪೊಲೀಸ್ ಸೋಗಿನಲ್ಲಿ ಹೋಗಿ ದರೋಡೆ ಮಾಡಿದ ಇಬ್ಬರು ಆರೋಪಿತರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರ್. ರಘು (36), ಆನಂದಬಾಬು (28) ಬಂಧಿತರು. ಆರೋಪಿಗಳಿಂದ ಮಾರುತಿ ಸುಜುಕಿ ಸ್ವಿಪ್ಟ್ ಕಾರ್ ಮತ್ತು ದರೋಡೆ ಮಾಡಿದ್ದ 05 ಗ್ರಾಂ ಬಂಗಾರದ ಉಂಗುರ, 17 ಗ್ರಾಂ ಬೆಳ್ಳಿ ಕೈ ಕಡಗ, 20 ಗ್ರಾಂ ಬೆಳ್ಳಿಯ ಚೈನು ಸೇರಿದಂತೆ ₹7000 ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ಕೆರೆಏರಿಯ ಮೇಲೆ ಇಸ್ಪೀಟ್ ಆಡುತ್ತಿದ್ದಾಗ ನಾಲ್ಕೈದು ಜನರು ಪೊಲೀಸರ ಸೋಗಿನಲ್ಲಿ ಬಂದು ₹27 ಸಾವಿರ ನಗದು, 05 ಗ್ರಾಂ ಬಂಗಾರದ ಉಂಗುರ ಮತ್ತು ಬೆಳ್ಳಿ ಚೈನು,ಕಡಗ ಹಾಗೂ ಮೊಬೈಲ್ ಗಳನ್ನು ಕಿತ್ತಕೊಂಡು ಹೋಗಿದ್ದಾರೆ ಎಂದು ಪ್ರಭಾಕರ್ ಎನ್ನುವವರು ದೂರು ನೀಡಿದ್ದರು.
ಪ್ರಕರಣದ ಆರೋಪಿತರನ್ನು ಪತ್ತೆ ಮಾಡಲು ಮಧು ಪಿ.ಬಿ ಅವರ ನೇತೃತ್ವದಲ್ಲಿ ಪಿಎಸ್ಐ ಜಗದೀಶ್, ರೂಪ್ಲಿಬಾಯಿ ಬಿ.ಎಸ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರಾದ ರುದ್ರೇಶ್, ರುದ್ರೇಶ್ ಮತ್ತು ಪರಶುರಾಮ, ಪ್ರವೀಣ್ ಗೌಡ ಮತ್ತು ಮಂಜುನಾಥ ಪ್ರಸಾದ್ ಹಾಗೂ ಜೀಪು ಚಾಲಕರಾದ ರೇವಣಸಿದ್ದಪ್ಪ ಅವರನ್ನೊಳಗೊಂಡ ತಂಡವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.