Indian population : ” ಭಾರತದಲ್ಲಿರುವ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಿಕೊಳ್ಳಬೇಕು ” ವಸಂತಕುಮಾರಿ ಆರ್.ಬಿ.
ದಾವಣಗೆರೆ : ಪ್ರಸ್ತುತ ಭಾರತದ ಜನಸಂಖ್ಯೆ 135 ಕೋಟಿಗೂ ಅಧಿಕವಾಗಿದೆ. ಜನಸಂಖ್ಯೆಯಲ್ಲಿ ಭಾರತ ದೊಡ್ಡ ದೇಶವಾಗಿ ಬೆಳೆಯುತ್ತಿದೆ. ಈ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಿಕೊಳ್ಳಬೇಕು ಇದು ನಮ್ಮ ಕೈಯಲ್ಲಿದೆ. ಇದರ ಸದ್ಬಳಕೆ ಮಾಡಿ ಕೊಳ್ಳಬೇಕು. ಈ ಮಾನವ ಸಂಪನ್ಮೂಲ ಸರಿಯಾದ ಮಾರ್ಗದಲ್ಲಿ ಸಾಗಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿಯಯಾದ ಶ್ರೀಮತಿ ಆರ್.ಬಿ. ವಸಂತಕುಮಾರಿ ಅವರು ತಿಳಿಸಿದರು.
ದಾವಣಗೆರೆ ತಾಲೂಕು ಆನಗೋಡು ಸಮೀಪದ ಉಳಪನಕಟ್ಟೆ ಗ್ರಾಮದಲ್ಲಿರುವ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರ ದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಉಪ -ಪ್ರಾದೇಶಿಕ ವಿಜ್ಞಾನ ಕೇಂದ್ರದ ನೂಡಲ್ ಅಧಿಕಾರಿಯಾಗಿರುವ ಹಾಗೂ ವಿಜ್ಞಾನ ವಿಷಯ ಪರೀಕ್ಷಕರಾಗಿರುವ ಶ್ರೀಮತಿ ವಸಂತಕುಮಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯ ಕಡಿಮೆಯಾಗುತ್ತಿದೆ. ಪ್ರಬಂಧ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯವನ್ನು ವೃದ್ಧಿಸುತ್ತದೆ. ಹಾಗೂ ಜನಸಂಖ್ಯಾ ಸ್ಫೋಟದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮತ್ತು ಪರಿಹಾರೋಪಾಯಗಳನ್ನು ಕುರಿತಂತೆ ತಮ್ಮ ಆಲೋಚನೆಗಳನ್ನು ಬರವಣಿಗೆ ಮೂಲಕ ಅಭಿವ್ಯಕ್ತಿಗೊಳಿಸುವುದಕ್ಕೆ ಈ ಪ್ರಬಂಧ ಸ್ಪರ್ಧೆ ಒಳ್ಳೆಯ ಅವಕಾಶವನ್ನು ಒದಗಿಸಿಕೊಡುತ್ತದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದ ಬಗ್ಗೆ ಮಾತನಾಡುತ್ತಾ 2006ರಲ್ಲಿ ಈ ಕೇಂದ್ರದ ಸ್ಥಾಪನೆ ಕಾರ್ಯ ಪ್ರಾರಂಭವಾಯಿತು.
ಇದರ ಸ್ಥಾಪನೆಗೆ ಅನೇಕ ಮಹಾನ್ ವ್ಯಕ್ತಿಗಳ ಪರಿಶ್ರಮ ಕಾರಣವಾಗಿದೆ ಇದರಲ್ಲಿ ಪ್ರಸ್ತುತ ಜಿಲ್ಲಾಧಿಕಾರಿಗಳನ್ನು ಸೇರಿಕೊಂಡಂತೆ ಹಿಂದೆ ಇದ್ದ ಜಿಲ್ಲಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಮತ್ತು ಹಿಂದೆ ಇದ್ದಂತಹ ಕೆಲವು ಉಪ ನಿರ್ದೇಶಕರುಗಳು ಹಾಗೂ ಬಿ ಐ ಇ ಟಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ. ವೃಷಭೇಂದ್ರಪ್ಪ, ವಿಜ್ಞಾನ ಸಮಿತಿಯ ಸದಸ್ಯರಾದ ಗುರುಸಿದ್ಧ ಸ್ವಾಮಿ, ಮಲ್ಲು ಮುಂತಾದವರ ಶ್ರಮ ಆಸಕ್ತಿ ಇಂದು ಈ ಕೇಂದ್ರ ಕಾರ್ಯಗತಗೊಳ್ಳಲು ಕಾರಣವಾಗಿದೆ ಎಂದು ಅವರನ್ನು ನೆನಪಿಸಿಕೊಂಡರು.
ಕರ್ನಾಟಕದಲ್ಲಿ ಚಿಕ್ಕಜಾಜೂರು ಗೌರಿಬಿದನೂರು ಬಳ್ಳಾರಿ ಹಾವೇರಿ ಹಾಗೂ ದಾವಣಗೆರೆಯಲ್ಲಿ ಈ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಇಂದು ಕಾರ್ಯ ನಿರ್ವಹಿಸುತ್ತಿವೆ. ಈ ಶಕ್ತಿ ಮತ್ತು ಸಂಪನ್ಮೂಲ ಗ್ಯಾಲರಿ, ಹವಾಮಾನ ವೈಪರಿತ್ಯ ಗ್ಯಾಲರಿ, ಹಾಗೂ ಫನ್ ಸೈನ್ಸ್ ಗ್ಯಾಲರಿ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ತಾರಾಲಯ ನಿರ್ಮಾಣ ಮಾಡುವ ಯೋಜನೆ ಇದ್ದು ಇದು ದಾವಣಗೆರೆ ಜಿಲ್ಲೆಯ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಹೆಚ್ಚು ಹೆಚ್ಚು ಉಪಯೋಗಕಾರಿ ಯಾಗಲಿದೆ ಎಂದು ತಿಳಿಸಿದರು. ಈ ಕೇಂದ್ರಕ್ಕೆ ಉಚಿತ ಪ್ರವೇಶ ಇರುತ್ತದೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಸಾರ್ವಜನಿಕರು ವಿದ್ಯಾರ್ಥಿಗಳು ಬಂದು ವೀಕ್ಷಣೆ ಮಾಡುವ ಅವಕಾಶವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಈ ಕೇಂದ್ರದಲ್ಲಿ ಕ್ಯುರೆಟರ್ ಹಾಗೂ ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ ಎರಡು ಜನ ಡಿ ಗ್ರೂಪ್ ಸಿಬ್ಬಂದಿ ಸೇರಿ ಒಟ್ಟು ನಾಲ್ಕು ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಈ ಕೇಂದ್ರಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಈ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳನ್ನು ನಡೆಸಲಾಗುವುದು ಹಾಗೂ ಶಿಕ್ಷಕರಿಗೆ ತರಬೇತಿ ಕಾರ್ಯಕಾರಿಗಳನ್ನು ಇಲ್ಲಿಯೇ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುರ್ಕಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿ ಜಿ ಜಗದೀಶ್ ಕೂಲಂಬಿ ಯವರು ಮಾತನಾಡುತ್ತ ಜನಸಂಖ್ಯೆಯು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಒಟ್ಟು ಜನರನ್ನು ಸೂಚಿಸುತ್ತದೆ ನಮ್ಮ ದೇಶದ ಜನಸಂಖ್ಯೆ ತ್ವರಿತ ಬೆಳವಣಿಗೆಯು ಇಂದು ಕಳವಳಕ್ಕೆ ಕಾರಣವಾಗಿದೆ.ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಕೃಷಿ ಕೈಗಾರಿಕೆ ವೈಜ್ಞಾನಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ.1987 ರ ಜುಲೈ 11 ರಂದು ವಿಶ್ವದ ಜನಸಂಖ್ಯೆ ಐದು ಬಿಲಿಯನ್ ತಲುಪಿತು ಇದರ ಅಂಗವಾಗಿ ವಿಶ್ವಸಂಸ್ಥೆ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಎಂದು ಘೋಷಿಸಲಾಯಿತು ಪ್ರಯುಕ್ತ ಎಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಜನಸಂಖ್ಯಾ ಸ್ಪೋಟದ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ನಿಯಂತ್ರಣದ ಅಗತ್ಯವನ್ನು ಮೂಡಿಸುವದಕ್ಕಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸುತ್ತಾ ಪ್ರಬಂಧ ಸ್ಪರ್ಧೆಯ ಕೆಲವು ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ ದಕ್ಷಿಣ ಮತ್ತು ಉತ್ತರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಿಂದುಶ್ರೀ ಕೆ.ಸರ್ಕಾರಿ ಪ್ರೌಢಶಾಲೆ ಕಬ್ಬೂರು, ದ್ವಿತೀಯ ಬಹುಮಾನವನ್ನು ಹರ್ಷಿತ ಎಚ್ಎನ್ ಸರ್ಕಾರಿ ಪ್ರೌಢಶಾಲೆ ಹಾಲವರ್ತಿ, ತೃತಿಯ ಬಹುಮಾನವನ್ನು ಅನು ಎನ್ ಪಿ ಸರ್ಕಾರಿ ಪ್ರೌಢಶಾಲೆ ಕಂದನಕೋವಿ. ಇವರು ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಮಾಜ ವಿಜ್ಞಾನ ಶಿಕ್ಷಕರಾದ ವಿ. ಪರಮೇಶ್ವರಯ್ಯ, ಬಾಬು ಬುಡನ್ ಬಿ, ಹಾಗೂ ಸಿ ಜಿ ಜಗದೀಶ್ ಕೂಲಂಬಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರುಗಳಾದ ಮಾರುತೇಶ್ ಎಸ್, ಸುಧಾಕರ ಜಿಎನ್, ಬಾಬು ಬುಡೇನ್, ಪ್ರಕಾಶ್ ಕೆಎಸ್, ಹನುಮಂತಪ್ಪ ಕೆ, ರಾಧಾ ಎಂ ಎಚ್, ವಿರೂಪಾಕ್ಷಿ ಹೆಚ್, ಪರಮೇಶ್ವರಯ್ಯ ವಿ, ಸಿ ಮಹಾಂತೇಶ್, ಟೆಕ್ನಿಕಲ್ ಅಸಿಸ್ಟೆಂಟ್ ಪ್ರವೀಣ್ ಮುಂತಾದವರು ಭಾಗವಹಿಸಿದ್ದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕ್ಯುರೆಟರ್ ಅರುಣ್ ರವರು ಸ್ವಾಗತಿಸಿ ನಿರೂಪಿಸಿದರು, ಶಿಕ್ಷಕ ಎಚ್ ವಿರೂಪಾಕ್ಷಿ ವಂದಿಸಿದರು.