ಕೋವಿಡ್ ಸಂಕಷ್ಟದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬೆಸ್ಕಾಂ ಕಚೇರಿ ಎದುರು ಹಾಗೂ ಆನ್‍ಲೈನ್ ನಲ್ಲೂ ಪ್ರತಿಭಟನೆ

ದಾವಣಗೆರೆ: ಕೋವಿಡ್ ಸಂಕಷ್ಟದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ನಡೆಯನ್ನು ಖಂಡಿಸಿ, ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸುವ ಜತೆಗೆ ಜಿಲ್ಲೆಯಾದ್ಯಂತ ಆನ್‍ಲೈನ್ ನಲ್ಲೂ ಪ್ರತಿಭಟಿಸಲಾಯಿತು.
ಕೋವಿಡ್ ನ ಈ ದುರಿತ ಕಾಲದಲ್ಲಿ ರಾಜ್ಯದಲ್ಲಿ ಏಪ್ರಿಲ್ 01 ರಿಂದಲೇ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆ ಏರಿಕೆ ಜೊತೆಗೆ ನಿಗದಿತ ಠೇವಣಿ ಮೊತ್ತವನ್ನೂ ಏರಿಕೆ ಮಾಡಲಾಗಿದೆ. ವಿದ್ಯುತ್ ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಕೋವಿಡ್ ಲಾಕ್‍ಡೌನ್ ಕಾರಣಕ್ಕೆ ತಮ್ಮ ಉದ್ಯೋಗ, ಆದಾಯ ಕಳೆದುಕೊಂಡಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೇರೆ ಕೆಲವು ರಾಜ್ಯಗಳಲ್ಲಿ ವಿದ್ಯುತ್, ನೀರಿನ ಶುಲ್ಕಗಳ ಪಾವತಿಯನ್ನು ರದ್ದುಗೊಳಿಸಿದ ಅಥವಾ ಮುಂದೂಡಿದ ನಿದರ್ಶನಗಳಿರುವಾಗ, ನಮ್ಮ ರಾಜ್ಯದಲ್ಲಿ ಪೂರ್ವಾನ್ವಯವಾಗುವಂತೆ ದರ ಏರಿಕೆ ಮಾಡಿರುವುದು ಖಂಡನೀಯ ಎಂದರು.
ನಷ್ಟ ಸರಿದೂಗಿಸಲು ಸೋರಿಕೆ, ಭ್ರಷ್ಟಚಾರ, ದುಂದುವೆಚ್ಚಗಳನ್ನು ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಸರಕಾರ ಜನರು ಯಾವ ರೀತಿ ಬದುಕುತ್ತಿದ್ದಾರೆ ಎಂಬುದನ್ನು ಅರಿಯದೇ, ಜನತೆಗೆ ವಿದ್ಯುತ್ ದರ ಏರಿಕೆಯಿಂದ ಕರೆಂಟ್ ಶಾಕ್ ಕೊಟ್ಟಂತಾಗಿದೆ. ವಿದ್ಯುತ್ ರಂಗವು ಸರ್ಕಾರದ ವ್ಯಾಪ್ತಿಯಲ್ಲಿರುವಾಗಲೇ ಇಂತಹ ಪರಿಸ್ಥಿತಿ ಇರುವಾಗ, ಖಾಸಗೀಕರಣಗೊಂಡಲ್ಲಿ ಎಷ್ಟು ನಿರ್ದಯಿಯಾಗಬಹುದು ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು. ದೆಹಲಿಯಲ್ಲಿ ಕಳೆದ 6 ತಿಂಗಳುಗಳಿಂದ ರೈತರು ನಡೆಸುತ್ತಿರುವ ಹೋರಾಟದ ಬೇಡಿಕೆಗಳಲ್ಲಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು ಎಂಬುದೂ ಒಂದಾಗಿದ್ದು, ರಾಜ್ಯದ ಜನತೆ ಈ ಹೋರಾಟವನ್ನು ಬಲಪಡಿಸಬೇಕು. ಸರಕಾರದ ಧೋರಣೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೋವಿಡ್ ಪರಿಹಾರದ ಹೆಸರಿನಲ್ಲಿ ಒಂದು ಕೈಯಲ್ಲಿ ಪುಡಿಗಾಸನ್ನು ನೀಡಿ ಇನ್ನೊಂದು ಕೈಯಲ್ಲಿ ಈ ರೀತಿ ವಿದ್ಯುತ್ ದರ, ಪೆಟ್ರೋಲ್, ಡೀಸೆಲ್ ದರವನ್ನು ನೂರರ ಗಡಿಯನ್ನು ದಾಟಿಸಿ, ಸರಕಾರ ತನ್ನ ಯಾವುದೇ ಜವಾಬ್ದಾರಿ ಇಲ್ಲ ಅಂತ ಲಜ್ಜೆಗೆಟ್ಟು ಹೇಳುತ್ತಿರುವುದು ವಿಪರ್ಯಾಸ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಜನರಿಗೆ ದ್ರೋಹ ಬಗೆದಿದೆ. ಎಲ್ಲಾ ಪಕ್ಷಗಳು ವಿರೋಧ ಪಕ್ಷವಾಗಿದ್ದಾಗ ಜನಪರ ಮಾತನಾಡಿ, ನಂತರ ಅಧಿಕಾರಕ್ಕೆ ಬಂದಾಗ ಈ ದೇಶದ ಬಂಡವಾಳಿಗರ ಪರವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದರು.
ಪ್ರತಿಭಟನೆಯಲ್ಲಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಕೈದಾಳೆ, ರಾಜ್ಯ ಸಮಿತಿ ಸದಸ್ಯರಾದ ಸುನೀತ್ ಕುಮಾರ್, ಜಿಲ್ಲಾ ಸಂಘಟನಾಕಾರರಾದ ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಪರಶುರಾಮ್, ಕಾವ್ಯ, ಪುಷ್ಪ, ಭಾರತಿ, ಲೋಕೇಶ್ ನೀರ್ಥಡಿ, ಬೀರಲಿಂಗಣ್ಣ ನೀರ್ಥಡಿ, ಪ್ರಕಾಶ್, ರಾಘವೇಂದ್ರ ನಾಯಕ್, ಗುರು, ಸ್ಮಿತಾ, ನಾಗಜ್ಯೋತಿ ಮತ್ತಿತರರು ಪಾಲ್ಗೊಂಡಿದ್ದರು.