ಪ್ರವೀಣ್ ಹತ್ಯೆ ಪ್ರಕರಣ: ಹಿಂದೂ ಕಾರ್ಯಕರ್ತರ ಮೇಲಿನ ಲಾಠಿ ಚಾರ್ಜ್ ಹಿಂದೆ ಸುನಿಲ್, ನಳಿನ್ ಕರಿನೆರಳು.!? ಸಿಟಿಜನ್ ರೈಟ್ಸ್ ಆರೋಪ

ಪ್ರವೀಣ್ ಹತ್ಯೆ, ಲಾಠಿ ಜಾರ್ಜ್ ಘಟನೆ: ಹಿಂದೂ ಸಂಘಟನೆಗಳ ಬೆನ್ನಿಗೆ ನಿಂತ ಸಿಟಿಜನ್ ರೈಟ್ಸ್; ನ್ಯಾಯಾಂಗ ತನಿಖೆಗೆ ಆಗ್ರಹ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಬಳಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟರ್ ಕೊಲೆ ಪ್ರಕರಣ ಖಂಡಿಸಿ ಬುಧವಾರ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದ ಘಟನೆ ಹಿಂದೂ ಸಂಘಟನೆಗಳ ನಾಯಕರನ್ನು ಕೆರಳಿಸಿದೆ. ಇದೀಗ ಈ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸದರಾದ ನಳಿನ್ ಕುಮಾರ್ ಕಟೀಲ್ ವಿರುದ್ದ ಪ್ರತಿಭಟನೆಗಿಳಿದಿದ್ದು, ಇದೀಗ ಮಾನವ ಹಕ್ಕುಗಳ ಸಂಘಟನೆಗಳೂ ಈ ಹೋರಾಟಕ್ಕೆ ಸಾಥ್ ನೀಡಿವೆ. ಇದೇ ವೇಳೆ ‘ಸಿಟಿಜನ್ ರೈಟ್ಸ್ ಫೌಂಡೇಷನ್‌ ಕೂಡಾ ಹಿಂದೂ ಕಾರ್ಯಕರ್ತರ ಕೂಗಿಗೆ ಧ್ವನಿಗೂಡಿಸಿದೆ.

ಭ್ರಷ್ಟಾಚಾರ ಪ್ರಕರಣಗಳ ವಿರುದ್ದ, ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿ ಜನಪರ ಧ್ವನಿಯಾಗಿ ನಿಂತರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಕರಾವಳಿಯಲ್ಲಿ ಬುಧವಾರ ನಡೆದ ಪೊಲೀಸ್ ಲಾಠಿ ಪ್ರಹಾರದ ಹಿಂದೆ ಸಚಿವ ಸುನಿಲ್ ಕುಮಾರ್ ಹಾಗೂ ಸಂಸದ ನಳಿನ್ ಕುಮಾರ್ ಅವರ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಈ ಕುರಿತಂತೆ ಸಿಟಿಜನ್ ರೈಟ್ಸ್’ ಮುಖ್ಯಸ್ಥ ಕೆ.ಎ.ಪಾಲ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.

ರಾಜಕೀಯ ನರಹತ್ಯೆಗೆ ಕಡಿವಾಣ ಹಾಕಲು ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟರ್ ಹತ್ಯೆಯ ನಂತರ ಇಡೀ ರಾಜ್ಯದಲ್ಲಿ ಆತಂಕದ ಸನ್ನಿವೇಶ ಸೃಷ್ಟಿಯಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಹಿತ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದಾಗಿ ಸಾಮಾನ್ಯ ಜನರು ಭೀತಿಯ ಸುಳಿಯಲ್ಲಿ ಸಿಲುಕಿದ್ದಾರೆ ಎಂದವರು ಸರ್ಕಾರದ ಗಮನಸೆಳೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆರೆಸ್ಸೆಸ್-ಬಿಜೆಪಿಯ ಅನೇಕ ಕಾರ್ಯಕರ್ತರ ಕೊಲೆಯಾಗಿದೆ. ಈ ಕೃತ್ಯ ಸಂಭವಿಸಿದಾಗಲೆಲ್ಲಾ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಹಿಂಸಾಚಾರ ನಡೆದಿದೆ. ಇಂತಹಾ ಘಟನೆಗಳಲ್ಲಿ ಸಾಮಾನ್ಯ ಹಿಂದೂ ಕಾರ್ಯಕರ್ತರೇ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಇದು ವಿಷಾದದ ಸಂಗತಿಯಾಗಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರೇ ಕೊಲೆಯಾಗುತ್ತಿರುವುದು ದುರಂತವಲ್ಲದೆ ಬೇರೇನೂ ಅಲ್ಲ. ಈ ಬಗ್ಗೆ ಸರ್ಕಾರ ಎಚ್ಚರಿಕೆಯ ಕ್ರಮ ವಹಿಸಬೇಕಿದೆ. ಇಂತಹಾ ಕೃತ್ಯಗಳು ರಾಜಕೀಯ ಹತ್ಯೆಯ ಭಾಗವಾಗಿದ್ದೇ ಆದಲ್ಲಿ ಇದರ ಹಿಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲು ಸರ್ಕಾರ ಮೀನಾ ಮೇಷ ಎಣಿಸಬಾರದು ಎಂದು ಸಿಎಂಗೆ ಮನವಿ ಮಾಡಿದ್ದಾರೆ.

*ಲಾಠಿ ಚಾರ್ಜ್ ಅನಿವಾರ್ಯವಿತ್ತೇ?*

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟರ್ ಕೊಲೆಯಾದ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಆ ವೇಳೆ, ಯಾರೂ ಯಾರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಸೇಡು ತೀರಿಸಿಕೊಂಡಿಲ್ಲ. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾಗೂ ಸಂಸದ
ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದು ಅವರ ವಿರುದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿರುವುದೂ ಸಹಜ ಬೆಳವಣಿಗೆ. ಆದರೆ ಬಿಜೆಪಿಯ ಈ ನಾಯಕರ ಮೇಲೆ ಹಲ್ಲೆ ಮಾಡುವಷ್ಟು ಹೀನಾಯ ನಡೆಯನ್ನು ಯಾವ ಕಾರ್ಯಕರ್ತರೂ ಅನುಸರಿಸಲಾರರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಿದ್ದರೂ ಸಚಿವರು ಹಾಗೂ ಸಂಸದರಿಗೆ ಘೆರಾವ್ ಹಾಕಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಪೊಲೀಸರು ಏಕಾಏಕಿ ನಡೆಸಿರುವ ಈ ಲಾಠಿ ಪ್ರಹಾರ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ಹೊರಹಾಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆಯೂ ವ್ಯಕ್ತವಾಗಿದೆ. ಇದನ್ನು ಗಮನಿಸಿದರೆ ಸರ್ಕಾರದ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಇಲ್ಲದೆ ಪೊಲೀಸರು ಈ ಕ್ರಮ ಅನುಸರಿಸಲು ಸಾಧ್ಯವೇ? ಎಂಬ ಅನುಮಾನ ಕಾರ್ಯಕರ್ತರದ್ದು. ಈ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ನಡೆ ಬಗ್ಗೆಯೇ ಬಿಜೆಪಿ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸುತ್ತಿರುವುದರಿಂದ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ ಎಂದು ಕೆ.ಎ.ಪಾಲ್ ಪ್ರತಿಪಾದಿಸಿದ್ದಾರೆ.

ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೂ ಈ ಕೃತ್ಯವನ್ನು ಖಂಡಿಸಿದ್ದು, ‘ಈಗ ಚಂದ್ರು, ಹರ್ಷ, ಪ್ರವೀಣ್ ಆಯ್ತು. ನಾಳೆ ಇನ್ಯಾರೋ?’ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಲೇ ಇಂತಹ ಕೃತ್ಯಗಳನ್ನು ತಡೆಯಬೇಕು. ಇಲ್ಲವಾದರೆ ನಾವು ಅದಕ್ಕೆ ಹೊಣೆಗಾರರಾಗುತ್ತೇವೆ ಎಂದು ಸರ್ಕಾರಕ್ಕೆ ಸಿ.ಟಿ.ರವಿ ಅವರು ಎಚ್ಚರಿಕೆ ನೀಡಿದ್ದಾರೆ ಎಂದಿರುವ ಸಿಟಿಜನ್ ರೈಟ್ಸ್ ಮುಖ್ಯಸ್ಥರು, ಬಹುತೇಕ ಗಣ್ಯರ ಅಭಿಪ್ರಾಯವೂ ಇದೇ ರೀತಿ ಇದ್ದು, ಕರ್ನಾಟಕದ ಇತಿಹಾಸದಲ್ಲಿ ಇಂತಹಾ ಕೃತ್ಯಗಳು ನಡೆಯುವುದನ್ನು ತಡೆಯಲೇಬೇಕಿದೆ. ಹಾಗಾಗಿ ಈ ಸಂಬಂಧ ನ್ಯಾಯಾಂಗದ ಪ್ರಮುಖರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕೆಂದು ಕೆ.ಎ.ಪಾಲ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!