PRED: 29 ಎಕರೆ ಸರ್ಕಾರಿ ಜಮೀನು ಹದ್ದು ಬಸ್ತು ಮಾಡಿಸಲು ನಿರ್ಲಕ್ಷ್ಯ.! ಕಾಳಜಿ ವಹಿಸಿದ ಸಿಇಓ ಸುರೇಶ್ ಇಟ್ನಾಳ್

ದಾವಣಗೆರೆ: (PRED) ದಾವಣಗೆರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹೆಸರಿಗೆ ಸೇರಿದ ಅಂದಾಜು 29 ಎಕರೆ ಭೂಮಿಯನ್ನು ಹದ್ದು ಬಸ್ತು ಮಾಡಿಸಲು ಭೂಮಿಯ ಹುಡುಕಾಟದಲ್ಲಿ ಹಲವು ವರ್ಷಗಳಿಂದ ತರಹೇವಾರು ಪತ್ರಗಳಲ್ಲಿ ಹೆಣಗಾಡುತ್ತಿರುವುದು ಗರುಡವಾಯ್ಸ್.ಕಾಂ ಹಾಗೂ ಗರುಡಚರಿತೆ ವಾರ ಪತ್ರಿಕೆಗೆ ಲಭ್ಯವಾಗಿದೆ.
ದಾವಣಗೆರೆ ಭೂದಾಖಲೆಗಳ ಸಹಾಯಕ ನಿದೇರ್ಶಕರ ಕಚೇರಿಗೆ ಐದಾರು ಪತ್ರಗಳನ್ನು ದಾವಣಗೆರೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಿಂದ ಬರೆಯಲಾಗಿದೆ, ಆದರೆ ಎ ಡಿ ಎಲ್ ಆರ್ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಸ್ವೀಕಾರವಾಗಿಲ್ಲ.
ಪಿ ಆರ್ ಇ ಡಿ ಪತ್ರದಲ್ಲೇನಿದೆ:
ದಾವಣಗೆರೆ ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಶಿರಮಗೊಂಡನಹಳ್ಳಿ ಗ್ರಾಮದ ಸರ್ವೆ ನಂ.57 ರಲ್ಲಿನ 28-02.08 ಹಾಗೂ 0.39 ಗುಂಟೆ ಎಕರೆ ಜಮೀನನ್ನು ಹದ್ದುಬಸ್ತು ಮಾಡುವ ಕುರಿತು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರು ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ, ದಾವಣಗೆರೆ ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯ ಶಿರಮಗೊಂಡನಹಳ್ಳಿ ಗ್ರಾಮದ ರಿ, ಸರ್ವೇ ನಂ.57ರಲ್ಲಿನ 28-02.08 ಹಾಗೂ 0-39 ಗುಂಟೆ ಜಮೀನು
ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ದಾವಣಗೆರೆ ಇವರ ಹೆಸರಿನಲ್ಲಿರುತ್ತದೆ.
ಸದರಿ ಒಟ್ಟಾರೆ 28-02.08 ಹಾಗೂ 0-39 ಗುಂಟೆ ಜಮೀನನ್ನು ಅಳತೆ ಮಾಡಿಸಿ ಹದ್ದುಬಸ್ತು ಮಾಡಿಸಲು ಭೂದಾಖಲೆಗಳ ಉಪ-ನಿರ್ದೇಶಕರು, ದಾವಣಗೆರೆ ಇವರಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ದಾವಣಗೆರೆ ಇವರು ಸ್ಥಳ ಪರಿಶೀಲಿಸಿ ಸೂಚಿಸಿರುತ್ತಾರೆ. ಅದರಂತೆ ತಾವು ತಮ್ಮ ಕಚೇರಿಯ ಅಧೀನ 02 ಜನ ಸರ್ವೇಯರ್‌ಗಳನ್ನು
ನಿಯೋಜಿಸಿ ಸದರಿ ಕಸಬಾ ಹೋಬಳಿ ವ್ಯಾಪ್ತಿಯ ಶಿರಮಗೊಂಡನಹಳ್ಳಿ ಗ್ರಾಮದ ರಿ, ಸರ್ವೇ ನಂ.57ರಲ್ಲಿನ
28-02.08 ಹಾಗೂ 0-39 ಗುಂಟೆ ಜಮೀನನ್ನು ಅಳತೆ ಮಾಡಿಸಿ ಹದ್ದುಬಸ್ತು ಮಾಡಿಸಲು ಕೋರಿದೆ ಎಂದು ದಿನಾಂಕ 28.05.2024 ಹಾಗೂ ದಿನಾಂಕ 05.06.2024 ರಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪತ್ರ ಬರೆದಿರುವ ಪ್ರತಿಗಳು ಗರುಡವಾಯ್ಸ್.ಕಾಂ ಹಾಗೂ ಗರುಡಚರಿತೆ ವಾರಪತ್ರಿಕೆ ಗೆ ಲಭ್ಯವಾಗಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಸೇರಿದ ಜಮೀನಿನ ವಿಷಯದ ಬಗ್ಗೆ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ ಸುರೇಶ್ ಯಟ್ನಾಳ್ ಅವರ ಬಳಿ ಕೆಲ ದಿನಗಳ ಹಿಂದೆ ಚರ್ಚಿಸಲಾಗಿತ್ತು.
ಸರ್ಕಾರಿ ಇಲಾಖೆಗೆ ಸೇರಿದ ಜಮೀನನ್ನು ಹದ್ದುಬಸ್ತು ಮಾಡಿಸಿಕೊಳ್ಳಲು ಗರುಡವಾಯ್ಸ್ ಕಾಳಜಿಗೆ ಸ್ಪಂದಿಸಿದ ಸಿಇಓ ತಕ್ಷಣ ದಾವಣಗೆರೆ ತಾಲ್ಲೂಕಿನ ತಹಸೀಲ್ದಾರ್ ಡಾ ಅಶ್ವಥ್ ಅವರನ್ನು ತಮ್ಮ ಕಚೇರಿಗೆ ಕರೆಯಿಸಿ ಗೊಂದಲದಲ್ಲಿರುವ ಪಿ ಅರ್ ಇ ಡಿ ಇಲಾಖೆಗೆ ಸೇರಿದ ಜಮೀನಿನ ಹದ್ದುಬಸ್ತು ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಿಸಿ ವರದಿಕೊಡಲು ತಿಳಿಸಿದ್ದರು.
ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಯಟ್ನಾಳ್ ಅವರ ಕಾಳಜಿಯಿಂದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಾವಣಗೆರೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಹೆಸರಿಗೆ ಇರುವ ಜಮೀನಿನ ಹದ್ದುಬಸ್ತು ಕಾರ್ಯವನ್ನು ಇತ್ತೀಚೆಗೆ ಡಿಜಿಪಿಎಸ್ ಸರ್ವೇ ಮೂಲಕ ಕೈಗೊಳ್ಳಲಾಗಿದ್ದು ಕೆಲವೇ ದಿನಗಳಲ್ಲಿ ವರದಿ ಸಿಇಓ ಕೈ ಸೇರಲಿದೆ.
ಸರ್ಕಾರಿ ಜಮೀನು ಅಕ್ರಮವಾಗಿ ಅನ್ಯರ ಪಾಲಾಗುವಂತೆ ತಡೆಯಲು ಗರುಡವಾಯ್ಸ್.ಕಾಂ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಬೆಳಕು ಚೆಲ್ಲುವ ಸಾಮಾಜಿಕ ಕಾರ್ಯವನ್ನು ಮಾಡುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲು ಸದಾ ಸಿದ್ದವಾಗಿರುತ್ತದೆ ಎಂದು ತಿಳಿಸಲು ಹರ್ಷಪಡುತ್ತದೆ.
– ಹೆಚ್ ಎಂ ಪಿ ಕುಮಾರ್ – ಸಂಪಾದಕರು