ಮಾಡಾಳು ಕುಟುಂಬದ ಮೇಲೆ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿದ್ಧತೆ?

ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಕುಟುಂಬದ ಇತರ ಸದಸ್ಯರ ವಿರುದ್ಧ ಆದಾಯಕ್ಕಿಂತ ಹೆಚ್ಚುಆಸ್ತಿ ಹೊಂದಿರುವ ಆರೋಪದಡಿ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿ ಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ವಿರೂಪಾಕ್ಷಪ್ಪ ವಿರುದ್ಧ ಒಂದು ಹಾಗೂ ಪ್ರಶಾಂತ್ ಮತ್ತು ಇತರರ ವಿರುದ್ಧ ಮೂರು ಪ್ರಕರಣಗಳನ್ನು ಈವರೆಗೆ ದಾಖಲಿಸಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಕುರಿತು ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದರು. ದಾಳಿ ವೇಳೆ ವಶಕ್ಕೆ ಪಡೆದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಕ್ತ ವಿಚಾರಣೆಯನ್ನೂ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ತನಿಖೆ ಅಂತಿಮ ಹಂತ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿ ಶಾಸಕರನ್ನು ಬಂಧಿಸಲಾಗಿತ್ತು. ಮಂಗಳವಾರ ಇಡೀ ದಿನ ವಿಚಾರಣೆ ನಡೆಸಲಾಗಿತ್ತು. ಬುಧವಾರವೂ ತನಿಖಾಧಿಕಾರಿಗಳು ಹಲವು ಬಾರಿ ಅವರನ್ನು ಪ್ರಶ್ನಿಸಿದ್ದಾರೆ.