3 ಲಕ್ಷದ ಕಲಾಕೃತಿಗಳ ಹೊತ್ತೊಯ್ದ ಕರಾಕನಿನಿ ಅಧ್ಯಕ್ಷ! ಹಣ ಪಾವತಿಗೆ ಪತ್ರ ಬರೆದಿರುವ ಡಿ.ರೂಪಾ ಮೌದ್ಗಿಲ್

ದಾವಣಗೆರೆ: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ನಿಗಮದ ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಹೊತ್ತೊಯ್ದಿರುವ ಆರೋಪ ಹೊತ್ತಿದ್ದು, ಎತ್ತಿಕೊಂಡು ಹೋಗಿರುವ ನಿಗಮದ ಕಲಾಕೃತಿಗಳಿಗೆ ನಿಗಧಿಪಡಿಸಿರುವ ಬೆಲೆಯನ್ನು ಪಾವತಿಸುವಂತೆ ವ್ಯವಸ್ಥಾಪಕ ನಿರ್ದೇಶಕರಾದ ಡಿ. ರೂಪಾ ಮೌದ್ಗಿಲ್ ಅಧ್ಯಕ್ಷರಿಗೆ ಜೂನ್ 01, 2022ರಂದು ಪತ್ರ ಬರೆದಿದ್ದಾರೆ.
ಹೌದು, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷರು ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಂದಿನಿ0ದ ಹಲವು ರೀತಿಯ ಕರಕುಶಲ ವಸ್ತುಗಳನ್ನು ಅನಾಮತ್ತಾಗಿ ಮಳಿಗೆಗಳಿಂದ ಎತ್ತಿಕೊಂಡು ಹೋಗಿದ್ದಾರೆ. ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಹಲವು ಬಾರಿ ಮೌಖಿಕವಾಗಿ ಕರಕುಶಲ ವಸ್ತುಗಳ ಬಾಬ್ತು ಮೊತ್ತವನ್ನು ಪಾವತಿಸಲು ಸೂಚಿಸಿದ್ದರು. ಆದರೂ ಸಹ ಇದುವರೆಗೂ ಪಾವತಿಸಿಲ್ಲ. ಇದನ್ನು ಮನಗಂಡ ವ್ಯವಸ್ಥಾಪಕ ನಿರ್ದೇಶಕರು ಕೂಡಲೇ ಕರಕುಶಲ ವಸ್ತುಗಳ ಮೊತ್ತವನ್ನು ನಿಗಮಕ್ಕೆ ಪಾವತಿಸುವಂತೆ ಪತ್ರ ಬರೆದು ಎಚ್ಚರಿಸಿದ್ದಾರೆ.

ಏನೇನು ಎತ್ತಿಕೊಂಡು ಹೋಗಿದ್ದಾರೆ ಗೊತ್ತಾ?
ನವೆಂಬರ್ 26ರ 2020ರಂದು 2145 ರೂ ಬೆಲೆಯ 01 ಶ್ರೀಗಂಧದ ಮಣಿ ಪುಷ್ಪ ಹಾರ, 4290 ರೂ. ಬೆಲೆಯ 2 ಶ್ರೀಗಂಧದ ಮಣಿ ಪುಷ್ಪ ಹಾರ, 94 ಸಾವಿರದ 575 ರೂ ಬೆಲೆಯ ಶ್ರೀ ಗಂಧದ ಕೃಷ್ಣ ವಿಗ್ರಹ, 1 ಲಕ್ಷದ 40 ಸಾವಿರದ 400 ರೂ. ಬೆಲೆಯ ಶ್ರೀಗಂಧದ ರಾಮ ವಿಗ್ರಹ ಹಾಗೂ 40090 ರೂ ಬೆಲೆಯ 190 ಶಾಲುಗಳು ಮತ್ತು 28.666 ರೂ. ಬೆಲೆಯ 2 ಶಿವಾನಿ ವುಡ್ ರಾಮ ವಿಗ್ರಹ ಸೇರಿ ಒಟ್ಟು 3 ಲಕ್ಷದ 10 ಸಾವಿರದ 166 ರೂ. ಬೆಲೆಯ ಕರಕುಶಲ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ.
ಇವಷ್ಟೇ ಅಲ್ಲದೆ ನಿಗಮದ ಕರಕುಶಲ ಕರ್ಮಿಗಳು ಹಾಗೂ ನಿಗಮದ ನೊಂದಾಯಿತ ಮಾರಾಟಗಾರರಿಂದ ಅನೇಕ ಕಲಾಕೃತಿಗಳನ್ನು ಹಣ ಪಾವತಿಸದೆ ಪಡೆದುಕೊಂಡಿರುತ್ತೀರಿ ಎಂಬ ಮಾಹಿತಿ ಇದ್ದು, ಮಾರಾಟಗಾರರಿಗೆ ಹಣ ಪಾವತಿ ಮಾಡದೇ ಇರುವ ವಿಷಯ ನಿಗಮಕ್ಕೆ ನೇರ ಸಂಬ0ಧ ಇಲ್ಲದಿದ್ದರೂ, ನಿಗಮದ ಅಧ್ಯಕ್ಷರ ಹುದ್ದೆಗೆ ಹಾಗೂ ನಿಗಮದ ಹೆಸರಿಗೆ ಕಳಂಕ ತರುವಂತಾಗಿದೆ. ಆದ್ದರಿಂದ ಇವೆಲ್ಲ ಕರಕುಶಲ ವಸ್ತುಗಳಿಗು ಹಣ ಪಾವತಿಸುವಂತೆ ಎಚ್ಚರಿಸಿದ್ದಾರೆ.

 
                         
                       
                       
                       
                       
                      