ಎಲ್ಲಾ ಸಮಾಜಗಳಿಗೂ ಮಾನವ ಹಕ್ಕುಗಳ ಸಂರಕ್ಷಣೆ ಅವಶ್ಯ: ಪ್ರವೀಣ್ ನಾಯಕ

ದಾವಣಗೆರೆ: ಶಾಂತಿ ಮತ್ತು ಭ್ರಾತೃತ್ವ ಬಯಸುವ ಎಲ್ಲಾ ಸಮಾಜಗಳಿಗೂ ಮಾನವ ಹಕ್ಕುಗಳ ಸಂರಕ್ಷಣೆ ಅವಶ್ಯ, ಹಲವಾರು ಸಂಸ್ಕೃತಿ, ಧರ್ಮ, ಭಾಷೆಗಳಿರುವ ನಮ್ಮ ಸಮಾಜದಲ್ಲಿ ಮಾನವ ಹಕ್ಕುಗಳ ಸಂಕಿರ್ಣವಾದ ವಿಷಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಾನವ ಹಕ್ಕುಳ ಕೋಶ ಹಾಗೂ ಮಾನವ ಹಕ್ಕುಗಳ ವೇದಿಕೆ ಸಹಯೋಗದಲ್ಲಿ ಗುರುವಾರ ನಗರದ ಸರ್ಕಾರದ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳು ಮತ್ತು ಸಂವಿಧಾನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಮನೆಯಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ, ನೆರಹೊರೆಯವರಲ್ಲಿ ಮಾನವ ಹಕ್ಕುಗಳನ್ನು ಗೌರವಿಸಬೇಕು. ಮಾನವ ಹಕ್ಕುಗಳ ಮತ್ತು ಸಂರಕ್ಷಣೆ ಪ್ರತಿಯೊಂದು ಸಮಾಜದಲ್ಲಿ ಸ್ವಾತಂತ್ರö್ಯ, ನ್ಯಾಯ ಮತ್ತು ಶಾಂತಿಯನ್ನು ಒದಗಿಸುತ್ತದೆ. ಎಲ್ಲಾ ಮಾನವ ಜೀವಿಗಳಿಗೆ ಸಮಾನತೆ ಆಧಾರದ ಮೇಲೆ ಘನತೆ, ಗೌರವ ಮತ್ತು ಕಾಳಜಿಯ ಬದುಕನ್ನು ನೀಡುತ್ತದೆ ಎಂದು ತಿಳಿಸಿದರು.
ಮಾನವ ಹಕ್ಕುಗಳ ವೇದಿಕೆಯ ಉಪಾಧ್ಯಕ್ಷ ಬಿ.ಎಂ.ಹನುಮAತಪ್ಪ ಮಾತನಾಡಿ, ಬಡತನ, ಹಸಿವು, ನಿರುದ್ಯೋಗ ಇವು ಮಾನವ ಹಕ್ಕುಗಳ ಬಹುದೊಡ್ಡ ಉಲ್ಲಂಘನೆ ಆಗಿದ್ದು, ಜಾತಿರಹಿತ ಮತ್ತು ವರ್ಗರಹಿತ ಸಮಾಜದಲ್ಲಿ ಸಮಾನತೆ ಸಾಧಿಸುವ ಮೂಲಕ, ಕರ್ತವ್ಯಗಳನ್ನು ನಿರ್ವಹಸುವ ಮೂಲಕ ಮಾನವ ಹಕ್ಕುಗಳಿಗೆ ಘನತೆ ತಂದು ಕೊಡಬಹುದಾಗಿದೆ ಎಂದು ತಿಳಿಸಿದರು.
ಇಂದಿಗೂ ಸಹ ಅಪೌಷ್ಠಿಕತೆಯಿಂದ ನರಳುತ್ತಿರುವವರನ್ನು ನೋಡಬಹುದಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಹಕ್ಕನ್ನು ನೀಡುವ ಮೂಲಕ ಸಮ ಸಮಾಜ ನಿರ್ಮಿಸಬೇಕೆಂದು ತಿಳಿಸಿದರು.
ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ, ಹಿರಿಯ ನ್ಯಾಯವಾಗಿ ಎಲ್.ಹೆಚ್.ಅರುಣ್‌ಕುಮಾರ್ ಮಾತನಾಡಿ, ಮಾನವ ಹಕ್ಕುಗಳು ಮತ್ತು ಸಂವಿಧಾನ ಒಂದೇ ನಾಣ್ಯದ 2 ಮುಖಗಳಾಗಿದ್ದು, ಮಾನವ ಹಕ್ಕುಗಳ ಪರಿಪೂರ್ಣ ಕಲ್ಪನೆ ಸಂವಿಧಾನದಲ್ಲಿ ಅಡಗಿದ್ದು, ಎಲ್ಲಾ ಮಾನವ ಹಕ್ಕುಗಳು ಸಹ ಮೂಲಭೂತ ಹಕ್ಕುಗಳಾಗಿವೆ. ಮಾನವ ಹಕ್ಕುಗಳ ಪರಿಕಲ್ಪನೆ ಮತ್ತು ಮಾನವ ಜೀವಿಗೆ ಘನತೆ ತಂದು ಕೊಡುವ ಪ್ರಯತ್ನಗಳು ಮನಕುಲದ ಇತಿಹಾಸದ ಉದ್ದಕ್ಕೂ ಸಾಗಿ ಬಂದಿವೆ. ನಿರ್ಧಿಷ್ಟವಾಗಿ 19ನೇ ಶತಮಾನದಲ್ಲಿ ನಡೆದ 2 ಮಹಾಯುದ್ದಗಳ ನಂತರ ಮಾನವ ಹಕ್ಕುಗಳಿಗೆ ಅಂತಾರಾಷ್ಟೀಯ ಒಡಂಬಡಿಕೆ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಾಯಿತು. ಪ್ರತಿಯೊಂದು ದೇಶಕ್ಕೂ ತಮ್ಮದೇ ಆದ ಸಂವಿಧಾನ ಇದ್ದು, ಮಾನವ ಹಕ್ಕುಗಳು ಜಗತ್ತಿನ ಸಂವಿಧಾನವಾಗಿವೆ ಎಂದು ತಿಳಿಸಿದರು.
ಕಾಲೇಜಿನ ಮಾನವ ಹಕ್ಕುಗಳ ಕೋಶದ ಸಂಚಾಲಕ ಡಾ.ಮಂಜಣ್ಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶೈಲಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಐಕ್ಯೂಎಸಿ ಸಂಚಾಲಕ ಡಾ.ಎಂ.ಪಿ.ಭೀಮಣ್ಣ, ಕಾಲೇಜಿನ ಅಧೀಕ್ಷಕ ಟಿ.ಶೇಷಪ್ಪ ಇದ್ದರು.
ವಿದ್ಯಾರ್ಥಿನಿಯರಾದ ಎನ್.ನಿವೇದಿತಾ ಹಾಗೂ ಮಧುಶ್ರೀ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಟಿ.ಜಿ.ರಾಘವೇಂದ್ರ ನಿರೂಪಿಸಿದರೆ, ಉಪನ್ಯಾಸಕ ಡಾ.ಅಶೋಕ್‌ಕುಮಾರ್ ವಂದಿಸಿದರು.