ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಉಪವಿಭಾಗಾಧಿಕಾರಿ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಾರಿಗೆ ಪ್ರಯಾಣ ದರ ಹೆಚ್ಚಾಗಿದೆ . ಅಗತ್ಯ ವಸ್ತುಗಳು ಸರಬರಾಜು ಮಾಡುವ ವಾಹನ ದರ ಹೆಚ್ಚಳವಾಗಿದೆ . ದಿನನಿತ್ಯ ಉಪಯೋಗಿಸುವ ಎಣ್ಣೆ , ಸಾಂಬಾರ್ ದಿನಸಿ , ಬೇಳೆ ಇನ್ನಿತರ ಅಗತ್ಯ ವಸ್ತುಗಳು ಗಗನಕ್ಕೆ ಏರಿಕೆಯಾಗಿದೆ. ಫೆ. 25ರಂದು ಎಲ್.ಪಿ.ಜೆ. ಅಡುಗೆ ಅನಿಲ ಸಿಲಿಂಡರ್ ದರದಲ್ಲಿ 25 ರೂ. ಏರಿಕೆಯಾಗಿದ್ದು , ತೈಲ ದರ ನಿರಂತರ ಹೆಚ್ಚಳದಿಂದ ಕಂಗಾಲಾಗಿರುವ ಜನತೆಗೆ ಗಾಯಾದ ಮೇಲೆ ಬರೆ ಇಟ್ಟಂತಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಉಜ್ಜಲ ಯೋಜನೆಯ ಫಲಾನುಭವಿಗಳಿಗೆ ಪೂರೈಸುವ ಎಲ್.ಪಿ.ಜಿ. ಸಿಲಿಂಡರ್‌ಗೂ ಈ ದರ ಹೆಚ್ಚಳ ಅನ್ವಯವಾಗುತ್ತದೆ. ಕಳೆದ ಮೂರು ತಿಂಗಳಲ್ಲಿ ಎಲ್.ಪಿ.ಜಿ. ಸಿಲಿಂಡರ್ ದರದಲ್ಲಿ 200 ರೂ . ಹೆಚ್ಚಳವಾಗಿದೆ. ಕಳೆದ ಕೆಲ ದಿನಗಳಿಂದ ತೈಲ ದರದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದ್ದು , ಲೀಟರ್ ಪೆಟ್ರೋಲ್ ದರ ಶತಕದ ಅಂಚಿಗೆ ತಲುಪಿದೆ . ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಳೆದ ಎರಡು ದಶಕಗಳಲ್ಲಿ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದ್ದರೂ ಮೋದಿ ಸರ್ಕಾರ ತೈಲದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಜನತೆಯ ಮೇಲೆ ಹೊರೆಯನ್ನು ಹೆಚ್ಚಿಸಿದೆ. ಕರೋನಾ ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನತೆಯ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ ಹಾಗೂ ಜನತೆಯನ್ನು ಸಂಕಷ್ಟಕ್ಕೆ ದೂಡಿ ಕೇಂದ್ರ ಸರ್ಕಾರ ಲಾಭ ಹೊಡೆಯುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್ , ಡೀಸೆಲ್ , ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಬೇಕು. ನಿರುದ್ಯೋಗಿ ಯುವಕರಿಗೆ ಭಗತ್ ಸಿಂಗ್ ನ್ಯಾಷನಲ್ ಎಂಪ್ಲಾಮೆಂಟ್ ಗ್ಯಾರಂಟಿ ಆಕ್ಟ್ ಜಾರಿಗೊಳಿಸಬೇಕೆಂದು ಸಮಿತಿಯು ಒತ್ತಾಯಿಸಿತು.

ಪ್ರತಿಭಟನೆಯಲ್ಲಿ ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಉಪಾಧ್ಯಕ್ಷರಾದ ಫಜುಲುಲ್ಲ, ಇರ್ಫಾನ್, ಹೆಚ್.ಎಂ. ಮಂಜುನಾಥ್, ಮಂಜುನಾಥ ದೊಡ್ಡಮನೆ, ಮಂಜುನಾಥ ಹರಳ್ಯನಗರ, ರುದ್ರೇಶ್ ಮಳಲಕೆರೆ, ಅಂಜಿನಪ್ಪ ಮಳಲಕೆರೆ, ಮಂಜುನಾಥ ಮಳಲಕೆರೆ, ಗದ್ದಿಗೇಶ್ ಪಾಳೇದ್, ಎ. ರಂಗಸ್ವಾಮಿ ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!