ರೈತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ರೈತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ದಾವಣಗೆರೆ: ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಮೇಲಿನ ದೌರ್ಜನ್ಯ ಮತ್ತು ಬೆಂಗಳೂರಿನ ಶಿವರಾಂ ಕಾರಂತ ಬಡಾವಣೆಯಲ್ಲಿರುವ ರೈತರ ಮೇಲೆ ಬಿಡಿಎ ಅಧಿಕಾರಿಗಳ ದೌರ್ಜನ್ಯಕ್ಕೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟನೆಯ ಸದಸ್ಯರುಗಳು ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಚೇಳೂರು ಹೋಬಳಿ ಗಂಗಯ್ಯನಪಾಳ್ಯ ಗ್ರಾಮದಲ್ಲಿ ೩೦-೪೦ ವರ್ಷಗಳಿಂದಲೂ ರೈತರು ಕಂದಾಯ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಈಗ ಆರಣ್ಯ ಇಲಾಖೆಯವರು ಆ ಭೂಮಿ ನಮಗೆ ಸೇರಿದ್ದೆಂದು ಗುಂಡಿ ತೆಗೆದು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಅಲ್ಲಿನ ರೈತರು ಎಷ್ಟೇ ಅಂಗಲಾಚಿದರೂ ಅರಣ್ಯ ಇಲಾಖೆ ಅಧಿಕಾರಿಗಳು ದರ್ಪ ತೋರಿಸಿ ರೈತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ಸಂದರ್ಭದಲ್ಲಿ ರೈತ ಮುಖಂಡ ದೊಡ್ಡನಂಜಯ್ಯ ಇತರರನ್ನು ಬಂಧಿಸಿ ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಈ ರೀತಿ ರಾಜ್ಯದ ಯಾವುದೇ ಮೂಲೆ ಎಲ್ಲಿಯೂ ದೌರ್ಜನ್ಯ ನಡೆಯಬಾರದು. ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿರುವಂತೆ, ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೂ ಸಹ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಬೆಂಗಳೂರಿನ ಯಲಹಂಕ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಡಿಎ ದೀರ್ಘಕಾಲದ ಹಿಂದಿನಿಂದಲೂ ನಿವೇಶನಕ್ಕಾಗಿ ಶಿವರಾಂ ಕಾರಂತ ಬಡಾವಣೆ ಮಾಡುವ ಪ್ರಯತ್ನ ಮುಂದುವರೆದಿದೆ, ಇದಕ್ಕೆ ಸಂಬಂಧಿಸಿದಂತೆ ರೈತರು ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಶುಕ್ರವಾರ ಬಿಡಿಎ ಅಧಿಕಾರಿಗಳು ರಾಕ್ಷಸ ಪ್ರವೃತ್ತಿಯನ್ನು ತಾಳಿ ಅಲ್ಲಿನ ರೈತರ ಮೇಲೆ ದೌರ್ಜನ್ಯ ನಡೆಸಿ, ೫ಎಕರೆ ಸಪೋಟ ತೋಟವನ್ನು ನಾಶ ಮಾಡಿರುವುದನ್ನ ಖಂಡಿಸಿದರು.

ಇಲ್ಲಿ ಯಾವುದೇ ಸಾರ್ವಜನಿಕ ವಿಚಾರಕ್ಕೆ (ಆಸತ್ರೆ, ಶಾಲೆ, ರಸ್ತೆ ನಿರ್ಮಾಣ ಇತ್ಯಾದಿ) ಭೂಸ್ವಾದೀನ ಮಾಡಿಕೊಂಡಿಲ್ಲ. ಶ್ರೀಮಂತರಿಗೆ, ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನಿವೇಶನ ಕೊಡಲು ಮುಂದಾಗಿದೆ. ಗ್ರಾಮದಲ್ಲಿರುವ ಬಡವರಿಗೆ ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ನಿವೇಶನ ಕೊಡುವ ಪ್ರಯತ್ನವೇ ನಡೆದಿಲ್ಲ. ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ರೈತರ ಮೇಲೆ ಅಧಿಕಾರಿಗಳು ನಡೆಸಿದ ದೌರ್ಜನ್ಯ, ಭೂಮಿ ಕಸಿದುಕೊಂಡಿರುವ ರೀತಿಯನ್ನ ಈ ದೇಶದ ಪ್ರಜ್ಞಾವಂತರೆಲ್ಲರು ಖಂಡಿಸಬೇಕು ಎಂದು ಪ್ರತಿಭಟನಾರರು ಕರೆ ನೀಡಿದರು.

ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ಆ ಭೂಮಿಯ ಮಾಲೀಕ ರೈತನೇ ಆಗಿರಬೇಕು. ಆತನಿಗೆ ಏಕಗಂಟಿನ ಹಣ ಬೇಕಾಗಿಲ್ಲ. ಆ ಭೂಮಿಯಲ್ಲಿ ಬರುತ್ತಿರುವ ಲಾಭದಷ್ಟು ಆದಾಯದ ಹಣವನ್ನು ಮಾಸಿಕವಾಗಿ, ಶೈಮಾಸಿಕವಾಗಿ, ವಾರ್ಷಿಕವಾಗಿ ನಿರಂತರವಾಗಿ ರೈತನಿಗೆ ಫಲಾನುಭವಿಗಳು ಅಥವಾ ಸರ್ಕಾರದಿಂದ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಹೊನ್ನೂರು ಮುನಿಯಪ್ಪ, ಕುರುವ ಗಣೇಶ್, ಪಿ.ಪಿ. ಮರುಳಸಿದ್ದಯ್ಯ, ಹೊನ್ನೂರು ರಾಜು, ಹನಗವಾಡಿ ರುದ್ರೇಶ್, ಮಾಯಕೊಂಡ ಬೀರಪ್ಪ,ಕಬ್ಬಳ ಸಂತೋಷ್, ಕೆಂಚನಹಳ್ಳಿ ಶೇಖರಪ್ಪ, ಬಟ್ಲಕಟ್ಟೆ ಪಾಲಾಕ್ಷಿ, ಮಲ್ಲಿಕಾರ್ಜುನಪ್ಪ, ಮಲ್ಲೇನಹಳ್ಳಿ ನಾಗರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!