ಕಾರ್ಮಿಕರ ಸಮಸ್ಯೆ ಪರಿಹರಿಸಲು ಭಾರತೀಯ ಮಜ್ದೂರ್ ಸಂಘದಿಂದ ಪ್ರತಿಭಟನೆ
ದಾವಣಗೆರೆ :ರಾಜ್ಯದ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸರ್ಕಾರವು ಈ ಕೂಡಲೇ ಭಾರತೀಯ ಮಜ್ದೂರ್ ಸಂಘದ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ತಿಂಗಳು ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಕಾರ್ಮಿಕರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ರಾಜ್ಯದ ಆರೋಗ್ಯ ಇಲಾಖೆಯ ಒಳ ಮತ್ತು ಹೊರಗುತ್ತಿಗೆ ನೌಕರರಿಗೆ ಸಂಬಂಧಿಸಿದ ಶ್ರೀನಿವಾಸಚಾರ್ ವರದಿಯನ್ನು ತಕ್ಷಣ ಜಾರಿಮಾಡಬೇಕು ಮತ್ತು ಆ ನೌಕರರನ್ನು ಖಾಯಂ ಮಾಡಬೇಕು. ರಾಜ್ಯದ ರಸ್ತೆ ಸಾರಿಗೆ ಇಲಾಖೆಯ ವೇತನ ಪರಿಷ್ಕರಣೆ, ತಕ್ಷಣ ಮಾಡಿ, ಸರ್ಕಾರಿ ನೌಕರರಿಗೆ ಸರಿ ಸಮಾನವೇತನ ನಿಗಧಿ ಮಾಡಬೇಕು.
ಸರ್ಕಾರದ ಎಲ್ಲಾ ಇಲಾಖೆಯಲ್ಲಿರುವ ಒಳ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ದತಿಯನ್ನು ಕೈಬಿಡಬೇಕು. ಹಾಲಿ ಇರುವ ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಬೇಕು. ಕನಿಷ್ಟ ವೇತನವನ್ನು 21000 ರೂ.ಗಳಿಗೆ ಏರಿಕೆ ಮಾಡಬೇಕು ಮತ್ತು ಮೂರು ವರ್ಷಕ್ಕೆ ಒಮ್ಮೆ ಪರಿಷ್ಕರಣೆ ಮಾಡಬೇಕು.
ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಪಿ.ಎಫ್ ನಿಧಿಯಿಂದ ನೀಡಲಾಗುತ್ತಿರುವ ಪಿಂಚಣಿಯನ್ನು 5000 ರೂಪಾಯಿಗೆ ಏರಿಸಬೇಕು. ಸರ್ಕಾರಿ ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು ಮತ್ತು ಅವುಗಳನ್ನು ಆಧುನಿಕರಣಗೊಳಿಸಬೇಕು. ಎಲ್ಲಾ ಕಾರ್ಮಿಕರ ಎಸ್.ಐ ಯೋಜನೆಯ ಸೌಲಭ್ಯದ ಮಿತಿಯನ್ನು 21,000 ರಿಂದ 35,000 ಕ್ಕೆ ಏರಿಸಬೇಕು. ಉಪಧನ (ಗ್ರ್ಯಾ ಚ್ಯೂಟಿ) ಯನ್ನು 15 ದಿನದಿಂದ ಒಂದು ತಿಂಗಳಿಗೆ ಏರಿಸಬೇಕು.
ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮವನ್ನು ಜಾರಿಗೊಳಿಸಬೇಕು. ಅಂಗನವಾಡಿ, ಆಶಾ ಮತ್ತು ಬಿಸಿಊಟದ ಕಾರ್ಮಿಕರನ್ನು ಖಾಯಂ ಗೊಳಿಸಬೇಕು. ಅಂಗನವಾಡಿ, ಆಶಾ ಮತ್ತು ಬಿಸಿಊಟದ ಕಾರ್ಮಿಕರಿಗೆ ಮಾಸಿಕ ಗೌರವಧನವನ್ನು ಹೆಚ್ಚಿಸಬೇಕು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ನಿಲ್ಲಿಸಿ ಅದರ ಬಗ್ಗೆ ತನಿಖೆಯಾಗಬೇಕು.
ಕೇರಳ ಮತ್ತು ತಮಿಳುನಾಡು ಮಾದರಿಯಲ್ಲಿ ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರಿಗೂ ಕಟ್ಟಡ ಕಾರ್ಮಿಕ ಮಂಡಳಿಯ ಮಾದರಿಯಲ್ಲಿ ಪ್ರತ್ಯೇಕ ಮಂಡಳಿಯನ್ನು ರಚನೆ ಮಡಬೇಕು. ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಕಾರ್ಮಿಕ ಭವನವನ್ನು ನಿರ್ಮಾಣಮಾಡಬೇಕು. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಬಂಡವಾಳ ಹೂಡಿ ಪುನಶ್ಛೇತನ ಗೊಳಿಸಬೇಕು. ಮೈಸುರು ಕಾಗದ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಬೇಕು ಎಂಬ ಬೇಡಿಕೆಗಳ ಕುರಿತು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಸುರ್ವೆ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷಗಂಗಾಧರ್, ನಾಗರಾಜ್,ಚಂದ್ರಪ್ಪ ಎಸ್., ದಿಳ್ಯಾನಾಯ್ಕ, ರಫೀಕ್, ಮಂಜುನಾಥ ನೆಲ್ಲಿ, ರವಿಕುಮಾರ್, ಸಂತೋಷ್, ಹೇಮಂತ್ ಇತರರು ಉಪಸ್ಥಿತರಿದ್ದರು.