ಹಂದಿಗಳ ಹಾವಳಿ ತಪ್ಪಿಸುವಂತೆ ಚಿಕ್ಕ ಮತ್ತು ದೊಡ್ ಬೂದಿಹಾಳ್ ಗ್ರಾಮಸ್ಥರಿಂದ ಪ್ರತಿಭಟನೆ
ದಾವಣಗೆರೆ: ಚಿಕ್ಕಬೂದಿಹಾಳ್, ದೊಡ್ಡಬೂದಿಹಾಳ್ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ದಾವಣಗೆರೆ ನಗರದ ಹಂದಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ನಗರದ ಹತ್ತಿರದ ಗ್ರಾಮಗಳಾದ ದೊಡ್ಡ ಬೂದಿಹಾಳ್ ಮತ್ತು ಚಿಕ್ಕಬೂದಿಹಾಳ್, ಯರಗುಂಟೆ ಗ್ರಾಮಗಳಲ್ಲಿ ಹಂದಿಗಳ ಹಾವಳಿಯಿಂದ ರೈತರು ಬೆಳೆದ ಭತ್ತ, ಮೆಕ್ಕೆಜೋಳ ಇತರೆ ಬೆಳೆಗಳನ್ನು ಬೆಳೆದು ಉಳಿಸಿಕೊಳ್ಳಲು ಹಗಲು- ರಾತ್ರಿ ಕಾಯುವ ಸ್ಥಿತಿ ಬಂದೊದಗಿದ್ದು, ದಿನರಾತ್ರಿ ನಿದ್ದೆಗೆಟ್ಟು, ರೈತರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆ ತಾನೆ ಭತ್ತದ ಸಸಿ ಬೀಜಗಳನ್ನು ದೊಡ್ಡಬೂದಿಹಾಳ್ ಗ್ರಾಮದ ಸತ್ತೂರು ರೇವಣಸಿದ್ದಪ್ಪ ಎಂಬುವರ ಸುಮಾರು ೩೦ ಸಾವಿರ ರು., ಬೆಲೆಬಾಳುವ ೩೦ ಪ್ಯಾಕೇಟ್ ಭತ್ತದ ಸಸಿ ಬೀಜಗಳನ್ನು ಮತ್ತು ಚಿಕ್ಕಬೂದಿಹಾಳ್ ಗ್ರಾಮದ ಜಂಗಪ್ಪರ ಸುರೇಶ್ ಇವರ ೧೦ ಪ್ಯಾಕೇಟ್ ಭತ್ತದ ಸಸಿ ಮಡಿಗಳನ್ನು ಹಂದಿಗಳು ಹಾಳು ಮಾಡಿವೆ. ಆದ್ದರಿಂದ, ಜಿಲ್ಲಾಧಿಕಾರಿಗಳು ಹಂದಿ ಮಾಲೀಕರ ಸಭೆಯನ್ನು ಕರೆದು ಮಾಲೀಕರಿಗೆ ತಮ್ಮ ಹಂದಿಗಳನ್ನು ಹದ್ದುಬಸ್ತಿನಲ್ಲಿ ಸಾಕಿಕೊಳ್ಳಬೇಕೆಂದು ಕ್ರಮವಹಿಸಬೇಕು, ಇಲ್ಲವಾದರೆ, ನಾವುಗಳು ಅನ್ಯ ಮಾರ್ಗ ಹುಡುಕಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು, ಸುರೇಶ್, ಗ್ರಾಮಸ್ಥರಾದ ಆರ್.ಆರ್. ಹನುಮಂತಪ್ಪ, ರುದ್ರಪ್ಪ, ಬಿ. ಸಿದ್ದಪ್ಪ, ಪ್ರಜ್ವಲ್, ಮಂಜುನಾಥ್, ಮಾರುತಿ, ಬಸವರಾಜಪ್ಪ, ದೇವೇಂದ್ರಚಾರ್, ಉದಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.