ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ : ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಹಾಸ್ಟೆಲ್ ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಹಾಸ್ಟೆಲ್ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ, ಅಲ್ಲಿವರೆಗೂ ಅಥವಾ ನಿವೃತ್ತಿವರೆಗೂ ಅವರನ್ನುಮುಂದುವರಿಸಬೇಕು. ವಸತಿ ನಿಲಯ, ವಸತಿ ಶಾಲೆ, ಕಾಲೇಜು, ಆಶ್ರಮಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ ಗ್ರೂಪ್‌ನ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರನ್ನು ಖಾಯಂಗೊಳಿಸಬೇಕು. ಗುತ್ತಿಗೆ ಹೊರಗುತ್ತಿಗೆ ಪದ್ದತಿಯನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು.
ವಸತಿನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ವೇತನವನ್ನು ಮಾಸಿಕ ರೂ.35,950 ಕ್ಕೆ ಹೆಚ್ಚಿಸಬೇಕು ಮತ್ತು ತುಟ್ಟಿ ಭತ್ಯೆಯನ್ನು ಬೆಲೆ ಏರಿಕೆ, ಹಣದುಬ್ಬರಗಳನ್ನು ಪರಿಗಣಿಸಿ ವೈಜ್ಞಾನಿಕವಾಗಿ ಕನಿಷ್ಠ ವೇತನವನ್ನು ನಿಗದಿ ಮಾಡಬೇಕು.ಕಾನೂನು ಬದ್ಧವಾಗಿ ನೀಡಲೇಬೇಕಾದ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂಧರ್ಭಿಕ ರಜೆಗಳನ್ನು ನೀಡಬೇಕು. ದಿನಕ್ಕೆ 8 ಗಂಟೆಗಳ ಅವಧಿ ಮಾತ್ರ ದುಡಿಸಿಕೊಳ್ಳಬೇಕು. ಲಾಕ್‌ಡೌನ್ ಅವಧಿಯ ವೇತನವನ್ನು ತಕ್ಷಣವೇ ಪಾವತಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.