ಶಾಲೆಗಳಲ್ಲಿ ಮೊಟ್ಟೆ ವಿತರಣೆ ನಿಲ್ಲಿಸಿದ್ರೆ ಪ್ರತಿಭಟನೆ.! ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದಿಂದ ಎಚ್ಚರಿಕೆ.!
ದಾವಣಗೆರೆ: ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮ ಮುಂದುವರೆಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಧ್ಯಕ್ಷ ಮಲ್ಲಾಪುರ ದೇವರಾಜ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೋನಾದಂತಹ ಮಹಾಮಾರಿ ಜನರು ಮತ್ತು ಮಕ್ಕಳ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರಿರುವುದರಿಂದ ಆರೋಗ್ಯ ಕ್ಷೀಣಿಸುತ್ತಿದ್ದು, ಮೊಟ್ಟೆಯಲ್ಲಿ ದೇಹಕ್ಕೆ ಬೇಕಾದ ಪ್ರೋಟಿನ್ ಸಿಗಲಿದೆ. ಆದರೆ, ಕೆಲವು ಮಠಾಧೀಶರು, ಸಂಘಟನೆಗಳ ಮುಖಂಡರು ಇದನ್ನು ವಿರೋಧಿಸುತ್ತಿರುವುದು ಖಂಡನೀಯ ಎಂದರು.
ಮಠಾಧೀಶರು ಆರೋಗ್ಯಪೂರ್ಣ ಸಮಾಜಕ್ಕೆ ಇಂಬುನೀಡಬೇಕು. ಆದರೆ, ಮೊಟ್ಟೆ ನೀಡುವುದು ಬೇಡವೇ ಬೇಡ ಎನ್ನುವುದು ತಪ್ಪು. ಮಠಾಧೀಶರಾಗಿ ಮೌಢ್ಯತೆ ತೊಳೆಯುವವರೆ ಮೌಢ್ಯತೆ ಬಿತ್ತುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸರಕಾರವು ಮಠಾಧೀಶರ ಮತ್ತು ಕೆಲವು ಸಂಘಟನೆಗಳ ಮಾತಿಗೆ ಬೆಲೆಕೊಟ್ಟು ಮೊಟ್ಟೆ ನೀಡುವುದನ್ನು ಸ್ಥಗಿತಗೊಳಿಸಿದರೆ ಇದೊಂದು ಸಂವಿಧಾನ ವಿರೋಧಿ ಸರಕಾರವೆಂದು ಪರಿಗಣಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಐಗೂರು ಶಿವಮೂರ್ತೆಪ್ಪ, ಅಣಜಿ ಶಿವಮೂರ್ತಿ, ಹುಲಿಕಟ್ಟೆ ತಿಮ್ಮೇಶ್, ಜಿ.ಟಿ. ನೂರುದ್ದೀನ್ ಇದ್ದರು.