ಪುನೀತ್ ರಂತಹ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡ ಸಮಾಜ ಮತ್ತು ಚಿತ್ರರಂಗ ಬಡವಾಗಿದೆ – ಶಾಸಕ ಡಾ.ಶಾಮನೂರು ಶಿವಶಂಕರಪ್ಪ

ಪುನೀತ್ ರಂತಹ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡ ಸಮಾಜ ಮತ್ತು ಚಿತ್ರರಂಗ ಬಡವಾಗಿದೆ – ಶಾಸಕ ಡಾ.ಶಾಮನೂರು ಶಿವಶಂಕರಪ್ಪ
ದಾವಣಗೆರೆ: ನಟ ಪುನೀತ್ ರಾಜಕುಮಾರ್ ಅವರಂತಹ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡ ಸಮಾಜ ಮತ್ತು ಚಿತ್ರರಂಗ ಬಡವಾಗಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಖೇದ ವ್ಯಕ್ತಪಡಿಸಿದರು.
ನಗರದ ಮಹಾನಗರಪಾಲಿಕೆ ಮುಂಭಾಗದಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯರು ಪುನೀತ್ ರಾಜಕುಮಾರ್ ಪುಣ್ಯತಿಥಿ ಅಂಗವಾಗಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆಗೆ ಚಾಲನೆ ನೀಡಿ ಮಾತನಾಡಿದರು.
ಪುನೀತ್ ಅವರ ವಿನಯವಂತಿಕೆ ಯುಜನಾಂಗಕ್ಕೆ ಮಾದರಿಯೇ ಸರಿ. ಅವರು ಸಾಧನೆಯ ಉತ್ತುಂಗದಲ್ಲಿದ್ದರೂ ಸಹ ಹಿರಿಯರನ್ನು ಕಂಡರೆ ಗೌರವಿಸುತ್ತಿದ್ದರು. ಅವರಿಗೆ ಅಹಂಮಿಕೆಯೆ ಇರಲಿಲ್ಲ ಎಂದು ಶ್ಲಾಘಿಸಿದರು.
ಅವರು ಕೇವಲ ನಟರಾಗಷ್ಟೆ ಇರಲಿಲ್ಲ, ಸಮಾಜಮುಖಿ ಕೆಲಸಗಳಿಗೂ ಅವರು ಹೆಸರಾಗಿದ್ದರು. ಅಂತಹ ಗುಣವಂತನನ್ನು ಕಳೆದುಕೊಂಡ ಸಿನಿಮಾ ರಂಗ ಹಾಗೂ ನಮ್ಮ ರಾಜ್ಯ ಬಡವಾಗಿದೆ ಎಂದು ವಿಷಾದಿಸಿದರು.
ಪುನೀತ್ ರಾಜಕುಮಾರ್ ಅವರರಂತೆ ಹಿರಿಯರನ್ನು ಕಂಡರೆ ಗೌರವಿಸುವ ಸಂಸ್ಕಾರ ಇಂದಿನ ಯುವಪೀಳಿಗೆಯಲ್ಲಿ ಬರಬೇಕಾಗಿದೆ. ಅಲ್ಲದೇ ಸಮಾಜಕ್ಕಾಗಿ ಸೇವೆ ಸಲ್ಲಿಸುವ ಉತ್ತಮ ಗುಣಗಳು ಯುವಜನರಲ್ಲಿ ಒಡಮೂಡಬೇಕಿದೆ ಎಂದು ಹೇಳಿದರು.
ಇಂದು ರಾಜ್ಯಾದ್ಯಂತ ೧೧ನೇ ದಿನದ ಪುಣ್ಯತಿಥಿ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಕಾಂಗ್ರೆಸ್ ಸದಸ್ಯರು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಆಯೋಜಿಸಿರುವುದು ಒಳ್ಳೆಯ ಕೆಲಸ ಎಂದು ಶ್ಲಾಘಿಸಿದರು.
ಮಹಾನಗರಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಪುನೀತ್ ರಾಜಕುಮಾರ್ ಸಮಾಧಿ ಬಳಿ ಅವರ ಕುಟುಂಬದ ವತಿಯಿಂದ ಪುಣ್ಯತಿಥಿ ಮಾಡುತ್ತಿರುವುದರಿಂದ ದಾವಣಗೆರೆಯಲ್ಲಿ ಮಹಾನಗರಪಾಲಿಕೆ ಕಾಂಗ್ರೆಸ್ ಸದಸ್ಯರು ಸೇರಿ ಅನ್ನಸಂತಾರ್ಪಣೆ ಆಯೋಜಿಸಿದ್ದೇವೆ. ಒಂದು ಸಾವಿರ ಜನರಿಗೆ ಬಿಸಿಬೇಳೆ ಬಾತು, ಮೊಸರನ್ನ ಮತ್ತು ಕುಡಿಯುವ ನೀರಿನ ಬಾಟಲ್ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮಹಾನಗರಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಬಿ.ಎಚ್.ವೀರಭದ್ರಪ್ಪ, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್, ಸೈಯದ್ ಕಲೀಲ್ ಪೈಲ್ವಾನ್, ಯುವರಾಜ್, ಎಲ್.ಎಂ.ಎಚ್.ಸಾಗರ್, ಅಬ್ದುಲ್ ಲತೀಫ್, ದ್ರಾಕ್ಷಣಮ್ಮ, ರಾಜೇಶ್ವರಿ, ಗೀತಾ ಚಂದ್ರಶೇಖರ್, ಶುಭಾ ಮಂಗಳ, ಜಯಶ್ರೀ, ಆಶಾ ಮುರುಳಿ, ಮಂಗಳಮ್ಮ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.