ರಾಯಚೂರು ನ್ಯಾಯಾಧೀಶರ ಮೇಲೆ ಕ್ರಮಕ್ಕೆ ಆಗ್ರಹ; ಪ್ರತಿಭಟನೆ
ದಾವಣಗೆರೆ: ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಭಾರತದ ಸಂವಿಧಾನಕ್ಕೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾಗೊಳಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಪೌರತ್ವ ರದ್ದು ಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ರಾಯಚೂರಿನ ನ್ಯಾಯಾಲಯದ ಆವರಣದಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‍ರ ಭಾವಚಿತ್ರ ಮತ್ತು ಮಹಾತ್ಮ ಗಾಂಧಿಯವರ ಭಾವಚಿತ್ರ ಇರಿಸಿ ಪೂಜೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಧ್ವಜಾರೋಹಣ ಮಾಡಬೇಕಾಗಿದ್ದ ರಾಯಚೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರು ಅಂಬೇಡ್ಕರ್ ಭಾವಚಿತ್ರವನ್ನು ಅಲ್ಲಿಂದ ತೆಗೆದರೆ ಮಾತ್ರ ಬರುತ್ತೇನೆ ಇಲ್ಲದಿದ್ದರೆ ನಾನು ಧ್ವಜಾರೋಹಣ ಕಾರ್ಯಕ್ರಮ ನಡೆಸುವುದಿಲ್ಲವೆಂದು ಹೇಳಿ ಅಲ್ಲಿ ಪೂಜೆಗೆ ಇಡಲಾಗಿದ್ದ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ನಂತರ ರಾಷ್ಟ್ರ ಧ್ವಜಾರೋಹಣ ಮಾಡಿರುತ್ತಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಮಲ್ಲಿಕಾರ್ಜುನ ಗೌಡರ ಈ ವರ್ತನೆಯಿಂದ ದೇಶಕ್ಕೆ ಅಪಚಾರ ಮಾಡಿದಂತಾಗಿದೆ. ಒಬ್ಬ ಜಿಲ್ಲಾ ನ್ಯಾಯಾಧೀಶರಾಗಿ ಮಾಡಿರುವ ಈ ಕೃತ್ಯವು ಪ್ರತಿಯೊಬ್ಬ ಪ್ರಜೆಗೂ ಮತ್ತು ರಾಷ್ಟ್ರ ದ್ರೋಹಕ್ಕೆ ಸಮವಾಗಿರುತ್ತದೆ. ಅಂಬೇಡ್ಕರ್‍ರಿಗೆ ಅವಮಾನ ಮತ್ತು ರಾಷ್ಟ್ರ ಸಂವಿಧಾನಕ್ಕೆ ಅಪಚಾರ ಎಸಗಿ ರಾಷ್ಟ್ರದ್ರೋಹ ಮಾಡಿರುವ ರಾಯಚೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಕೂಡಲೇ ಅವರನ್ನು ಬಂಧಿಸಿ ಸೇವೆಯಿಂದ ಅಮಾನತ್ತುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಬ್ಬಳ್ಳಿ ಮೈಲಪ್ಪ, ನಿಂಗಪ್ಪ, ಗುಮ್ಮನೂರು ರಾಮಚಂದ್ರಪ್ಪ, ಲಕ್ಷ್ಮಣ್, ಹೂವಿನಮಡು ಅಂಜನಪ್ಪ ಇತರರು ಇದ್ದರು.