ರೈಲ್ವೆ ಅಧಿಕಾರಿಗಳು, ಮಂತ್ರಿಗಳು ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿ ಜನರ ಕಷ್ಟ ನಿವಾರಿಸಲಿ. ಡಾ ಎಚ್ ಕೆ ಎಸ್ ಸ್ವಾಮಿ

Railway officials and ministers should travel in normal class and alleviate the hardships of people. Dr HKS Swamy
ಚಿತ್ರದುರ್ಗ:  ರೈಲ್ವೆ ಮಂತ್ರಿಗಳು, ಅಧಿಕಾರಿಗಳು, ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿ, ಜನರ ಸಂಕಷ್ಟಗಳನ್ನ ಪರಿಹರಿಸಲು ಪ್ರಯತ್ನಿಸಲಿ. ಜನರು ಕುಳಿತುಕೊಳ್ಳಲು ಸ್ಥಳವಿಲ್ಲದೆ, ಕಾಲಿಡಲು ಸಹ ಸ್ಥಳವಿಲ್ಲದೆ, ನೆಲದ ಮೇಲೆ, ಶೌಚಾಲಯದ ಬಾಗಿಲ ಬಳಿ, ಒಮ್ಮೊಮ್ಮೆ  ಶೌಚಾಲಯದ ಒಳಗೂ ಸಹ, ಒಬ್ಬರ ಮೇಲೆ ಒಬ್ಬರು ಕುಳಿತು, ಕಾಲಿಡಲು ಜಾಗವಿಲ್ಲದಂತ ಪರಿಸ್ಥಿತಿಯಲ್ಲಿ, ನೂಕು ನುಗ್ಗಲಿನಲ್ಲಿ ಬಾಗಿಲ ಬಳಿ ನೇತಾಡಿಕೊಳ್ಳುತ್ತಾ ನಿಂತು, ಗಂಟೆಗಟ್ಟಲೆ ಪ್ರಯಾಣಿಸುವುದನ್ನು ನೋಡಿದರೆ, ನಾವು ಜನಸಾಮಾನ್ಯರನ್ನ ಯಾವ ರೀತಿ ನೋಡಿಕೊಳ್ಳುತ್ತಿದ್ದೇವೆ ಎಂಬ ಅರಿವು ಉಂಟಾಗುತ್ತದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್ .ಕೆ . ಎಸ್. ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.
ಭಾರತೀಯ ರೈಲ್ವೆ ಜನಸಾಮಾನ್ಯರ ಬಗ್ಗೆ ತಿರಸ್ಕಾರ ಭಾವನೆಯನ್ನು ಹೊಂದುತ್ತಿದ್ದು, ವೇಗವಾಗಿ ಚಲಿಸುವ ಎಲ್ಲಾ ರೈಲುಗಳಲ್ಲೂ ಸಹ ಜನಸಾಮಾನ್ಯರಿಗೆ ಕೇವಲ ಹಿಂದೆ  ಎರಡು, ಮುಂದೆ ಎರಡು ಭೋಗಿಗಳನ್ನ ಹಾಕಿ, ಸಾವಿರಾರು ಜನರನ್ನ ಅದರಲ್ಲಿ ನೂಕುಲುಗಲಿನಲ್ಲಿ ಪ್ರಯಾಣಿಸುವಂತೆ ಮಾಡುತ್ತಿರುವುದನ್ನ ನೋಡಿದರೆ, ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮತ್ತು ಮಂತ್ರಿಗಳಿಗೆ ಜನಸಾಮಾನ್ಯರ ಕಷ್ಟಗಳು ಅರಿವಿಗೆ ಬರುತ್ತಿಲ್ಲ ಎಂಬುದು ತೋರಿಸುತ್ತದೆ. ಸ್ವತಂತ್ರ ಬಂದು ಇಷ್ಟು ವರ್ಷಗಳಾದರೂ ಸಹ ರೈಲ್ವೆ ಇಲಾಖೆಯಲ್ಲಿ ಜನಸಾಮಾನ್ಯರ ಕಷ್ಟವನ್ನು ಅರಿತುಕೊಂಡು, ಅವರಿಗೆ ಸ್ಪಂದಿಸುವಂತಹ ವ್ಯವಸ್ಥೆ ಮಾಡುವುದನ್ನು ನಾವು ಕಲಿಯಲೇ ಇಲ್ಲ. ಬ್ರಿಟಿಷ್ಕಾರ ಕಾಲದಲ್ಲಿ ಇದ್ದಂತೆ ಜನಸಾಮಾನ್ಯರನ್ನ ಮೂರನೇ ದರ್ಜೆಯಲ್ಲಿ ತುರಿಕೆ, ಶ್ರೀಮಂತರಿಗೆ ವೆಚ್ಚಮಯವಾದ, ಸೌಲಭ್ಯಗಳಿಂದ ಕೂಡಿದ, ಹವಾ ನಿಯಂತ್ರಿತ ಭೋಗಿಗಳನ್ನ ಹಾಕಿ, ತಾರತಮ್ಯ ನೀತಿಯನ್ನ ಅನುಸರಿಸುತ್ತಿರುವುದ  ನೋಡಿದರೆ ರೈಲ್ವೆ ಇಲಾಖೆಗೆ ಜನಸಾಮಾನ್ಯರು ಕಣ್ಣಿಗೆ ಬೀಳುತ್ತಿಲ್ಲ ಎಂದು ಅನಿಸುವುದು ನಿಶ್ಚಿತವಾಗಿದೆ ಎಂದರು.
ದೇಶದಲ್ಲಿ ಅದ್ಭುತ ರೈಲುಗಳನ್ನ ಉತ್ಪಾದಿಸಿ, ವೇಗದಲ್ಲಿ ಚಲಿಸುವುದರ ಬಗ್ಗೆ ಮಾತ್ರ ಗಮನ ಹರಿಸುತ್ತಿರುವ ಇಲಾಖೆ, ಜನಸಾಮಾನ್ಯರು ಯಾವ ರೀತಿ ರೈಲು ಭೋಗಿಗಳಲ್ಲಿ ಕುಳಿತು, ನಿಂತು, ಗಂಟೆ ಗಟ್ಟಲೆ, ದಿನಗಟ್ಟಲೆ ಪ್ರಯಾಣಿಸುತ್ತಿದ್ದಾರೆ ಎಂಬ ಪರಿಶೀಲನೆ ಮಾಡದೆ, ಅವರಿಗೆ ಇನ್ನೊಂದಿಷ್ಟು ಸಾಮಾನ್ಯ ಬೋಗಿಗಳನ್ನ ಹಾಕಿ, ಅವರು ಸಹ ಮನುಷ್ಯರಂತೆ ಕುಳಿತು ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಬೇಕಾದ್ದು ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ದೊಡ್ಡ ದೊಡ್ಡ ವೇಗದ ಟ್ರೈನುಗಳಲ್ಲಿ ಕೇವಲ ಎರಡು ಅಥವಾ ಮೂರು ಸಾಮಾನ್ಯ ಭೋಗಿಗಳನ್ನ ಹಾಕಿ, ಅದರಲ್ಲಿ ಸಾವಿರಾರು ಜನರನ್ನು ತುರಿಕೆ, ಕುರಿಗಳಂತೆ ಅವರ ಶೌಚಾಲಯದಲ್ಲಿ ಕುಳಿತು, ಬಾಗಿಲಲ್ಲಿ ನಿಂತು, ನೇತಾಡಿ, ಲಗೇಜ್ ಇಡುವ ಸ್ಥಳದಲ್ಲೇ ಕುಳಿತು, ಒಬ್ಬರ ಮೇಲೊಬ್ಬರು ಮಲಗುತ್ತಾ, ಒಬ್ಬರನ್ನೊಬ್ಬರು ತಿವಿದುಕೊಂಡು ದಾಟುತ್ತಾ, ಶೌಚಾಲಯಕ್ಕೆ ಹೋಗುತ್ತಾ, ಶೌಚಾಲಯದ ಬಾಗಿಲಲ್ಲೇ ಗಂಟೆಗಟ್ಟಲೆ ದುರ್ವಾಸನೆಯನ್ನು ಕುಡಿದು ಕುಳಿತು, ಪ್ರಯಾಣಿಸುವ ಪ್ರಯಾಣಿಕರನ್ನು ನೋಡಿದರೆ, ರೈಲ್ವೆ ಇಲಾಖೆಗೆ ಜನಸಾಮಾನ್ಯರು ಮನುಷ್ಯರಂತೆ ಕಾಣುತ್ತಿಲ್ಲ, ಪ್ರಾಣಿಗಳೆಂದು ತಿಳಿದುಕೊಂಡಿರಬಹುದೇನೋ ಎಂಬ ಅನುಮಾನ ಬರುತ್ತದೆ ಎಂದರು.
ಜನಸಾಮಾನ್ಯರು ಸಹ ನೂರಾರು ರೂಪಾಯಿಗಳನ್ನು ನೀಡಿ, ಒಳ್ಳೆಯ ಪ್ರಯಾಣ ಮಾಡಬೇಕೆಂದು ರೈಲ್ವೆ ನಿಲ್ದಾಣಕ್ಕೆ ಬಂದರೆ, ಅವರು ಜನಸಾಮಾನ್ಯರ ಭೋಗಿ ಒಳಗಡೆ ತುರುಕಿಕೊಂಡು ಒಳ ನುಗ್ಗುವ ದೃಶ್ಯವೇ ಗಾಬರಿಯಾಗುವಂತಿರುತ್ತದೆ. ಕೇವಲ ಹಿಂದೆ ಎರಡು, ಮುಂದೆ ಎರಡು ಭೋಗಿಗಳನ್ನ ಹಾಕಿ ಅವರನ್ನು ಹೈರಾಣ ಮಾಡಿ, ಅವರು ಅತ್ತಿಂದಿತ್ತ ಓಡಾಡುವುದು, ಅವಸರದಲ್ಲಿ ರೈಲಿನ ಚಕ್ರಕ್ಕೆ ಸಿಕ್ಕಿ ಪ್ರಾಣ ಕಳೆದುಕೊಳ್ಳುವುದು, ಅವರಿಗೆ ಸರಿಯಾದ ಒಳಗಡೆ ನೀರಿನ ವ್ಯವಸ್ಥೆ ಇಲ್ಲದೆ, ಶೌಚಾಲಯ ತುಂಬಿ ತುಳುಕುತ್ತಿದ್ದು, ಹೊಳಕು ದುರ್ವಾಸನೆ ಬಂದರೂ ಸಹ ಅವುಗಳನ್ನು ಸ್ವಚ್ಛಗೊಳಿಸದೆ ಹಾಗೆ ಅವರನ್ನ ಪ್ರಯಾಣಿಸುವಂತೆ ಮಾಡುವುದು, ತಿವಿದುಕೊಂಡು ನಡೆದಾಡುವ ದೃಶ್ಯವನ್ನು ರೈಲ್ವೆ ಅಧಿಕಾರಿಗಳು ಮತ್ತು ಮಂತ್ರಿಗಳು ಇನ್ನೂ ನೋಡಿಲ್ಲವೆಂದು ಕಾಣುತ್ತದೆ.  ಜನಸಾಮಾನ್ಯರ ಭೋಗಿಗಳಿಗೆ ಸಿಸಿ ಕ್ಯಾಮೆರಾಗಳನ್ನ ಹಾಕಿ, ಅವುಗಳನ್ನ ವಿಮರ್ಶೆ ಮಾಡಿ, ಜನಸಾಮಾನ್ಯರಿಗೆ ಇನ್ನೊಂದೆರಡು ಭೋಗಿಗಳನ್ನ ಹಾಕಿ, ಅವರು ಸಹ ಸ್ವಲ್ಪಮಟ್ಟಿಗಾದರೂ ಸುಖವಾಗಿ ಪ್ರಯಾಣಿಸುವಂತೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಏನೂ ಹಣದ ತೊಂದರೆ ಇಲ್ಲ, ಇನ್ನೊಂದೆರಡು ಭೋಗಿಗಳನ್ನ ಎಳೆಯಲಾರದಷ್ಟು ನಿಶ್ಚೇಜನವಾದ ಇಂಜಿನ್ ಗಳನ್ನು ನಾವು ಕಂಡುಹಿಡಿದಿಲ್ಲ, ಬಲಿಷ್ಠವಾದ ಇಂಜಿನ್ ಗಳಿದ್ದು, ವೇಗವಾಗಿ ಹೋಗುವ ರೈಲುಗಳಿದ್ದರೂ ಸಹ, ಜನಸಾಮಾನ್ಯರನ್ನ ಮಾತ್ರ ಇನ್ನು ಕುರಿಗಳ ತರ ತುರುಕುವ ಮಟ್ಟಿಗೆ ಇಟ್ಟುಕೊಂಡಿರುವುದು ಆಶ್ಚರ್ಯ ತರುತ್ತದೆ ಎಂದರು.
ಹಬ್ಬ ಹರಿದಿನಗಳಲ್ಲಿ, ರಜಾ ದಿನಗಳಲ್ಲಿ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದ ರೈಲ್ವೆ ಅಧಿಕಾರಿಗಳು, ಅಂತ ಸಮಯದಲ್ಲಾದರೂ ಜನಸಾಮಾನ್ಯರಿಗೆ ಒಂದೆರಡು ಹೆಚ್ಚಿನ ಭೋಗಿಗಳನ್ನ ಹಾಕಲು ಅವರಿಗೆ ಅದು ಏನು ಕಷ್ಟ ಬಂದಿದೆಯೋ ದೇವರೇ ಬಲ್ಲ ಎಂದರು.
ತುರ್ತು ಪರಿಸ್ಥಿತಿಯಲ್ಲಿ, ಹೆಚ್ಚಿನ ಜನಸಂಖ್ಯೆ ಸ್ಟೇಷನ್ನಲ್ಲಿದ್ದಾಗ ಅಧಿಕಾರಿಗಳು ಮಾಹಿತಿ ಪಡೆದು, ಹಿಂದಿನ ಸ್ಟೇಷನ್ನಲ್ಲೇ ಅವರಿಗೆ ಮಾಹಿತಿ ನೀಡಿ, ಹೆಚ್ಚಿನ ಭೋಗಿಗಳನ್ನ ರೈಲುಗಳಿಗೆ ಅಳವಡಿಸಿ, ಜನಸಾಮಾನ್ಯರ ಪ್ರಯಾಣದ ಬಗ್ಗೆ ಯೋಚಿಸುವಂಥಾಗಲಿ ಎಂದು ವಿನಂತಿಸಿಕೊಂಡಿದ್ದಾರೆ.
ಗಾಂಧೀಜಿಯವರು ಮೂರನೇ ದರ್ಜೆ ರೈಲಿನಲ್ಲಿ ಪ್ರಯಾಣಿಸಿ, ಜನಸಾಮಾನ್ಯರ ಕಷ್ಟಗಳನ್ನು ನೋಡಿಕೊಂಡು ಪರಿಹರಿಸಲು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದರು. ಅದೇ ಪರಿಸ್ಥಿತಿ ಈಗ ಮತ್ತೊಮ್ಮೆ ನಮಗೆ ಒದಗಿ ಬಂದಿದೆ, ಮಹಿಳೆಯರು, ಮಕ್ಕಳು, ವೃದ್ಧರು, ರೋಗಿಗಳು, ಅಂಗವಿಕಲರು, ಜನಸಾಮಾನ್ಯರು ನುಗ್ಗಿ ಒಳ ಹೋಗಿ ಕುಳಿತುಕೊಳ್ಳುವ ದೃಶ್ಯ ಎಂತವರ ಮನ ಕರಗಿಸುವಂತಿರುತ್ತದೆ . ಈ ಎಲ್ಲ ದೃಶ್ಯಗಳು ಸಹ ಇನ್ನೂ ರೈಲ್ವೆ ಅಧಿಕಾರಿಗಳ, ಮಂತ್ರಿಗಳ ಗಮನಕ್ಕೆ ಬಾರದೆ ಇರುವುದು ಶೋಷಣೆಯ ಎಂದರು.
ಜನಸಾಮಾನ್ಯರು ಸಹ ಪ್ರಾಣಿಗಳಂತೆ ಸಂಚರಿಸಿ, ಎಲ್ಲೆಂದರಲ್ಲಿ ಉಗಿದು,, ಶೌಚಾಲಯವನ್ನು ನೀರು ಹಾಕದೆ, ಕಸ ಎಸೆದು, ಗಲೀಜು ಮಾಡಿಕೊಂಡು, ಅದೇ ನೆಲದ ಮೇಲೆ ಮಲಗಿಕೊಂಡು, ಹೋಗುತ್ತಿರುವುದನ್ನು ನೋಡಿದರೆ ಜನಸಾಮಾನ್ಯರಲ್ಲೂ ಸಹ ಸರಿಯಾದ ಜಾಗೃತಿ ಮೂಡಿಸಿಲ್ಲ ಎಂಬುದು ಅರಿವಿಗೆ ಬರುತ್ತದೆ ಎಂದರು.
ಈಗಲಾದರೂ ರೈಲ್ವೆ ಇಲಾಖೆಯವರು, ವೇಗದ ರೈಲುಗಳನ್ನು ಬಿಡುವುದಕ್ಕಿಂತ ಮುಂಚೆ ಜನಸಾಮಾನ್ಯರಿಗೆ, ಕನಿಷ್ಠ ಸೌಲಭ್ಯ ನೀಡುವಂತಹ ವ್ಯವಸ್ಥೆ ಮಾಡಿ, ಅವರಿಗೂ ಸಹ ಹೆಚ್ಚಿನ ಮಟ್ಟದ ಭೋಗಿಗಳನ್ನ ಹಾಕಿ ಸುಖಕರವಾಗಿ ಪ್ರಯಾಣಿಸುವಂತೆ ಮಾಡಲಿ ಎಂದು ಆಶಿಸಿದ್ದಾರೆ.
ರೈಲುಗಳಲ್ಲಿ ಹೆಚ್ಚಿನ ಹವಾನಿಯಂತ್ರಿತ, ಕಾಯ್ದಿರಿಸಿದ ಭೋಗಿಗಳು, ವೇಗವಾಗಿ ಚಲಿಸುವ ರೈಲುಗಳು, ಗುಣಮಟ್ಟದ ರೈಲ್ವೆ ನಿಲ್ದಾಣಗಳನ್ನು ಬಗ್ಗೆ ಗಮನ ಹರಿಸುತ್ತಿರುವ ರೈಲ್ವೆ ಇಲಾಖೆ, ಜನಸಾಮಾನ್ಯರು ಸುಖಕರವಾಗಿ ಪ್ರಯಾಣಿಸುತ್ತಿದ್ದಾರ?, ಅವರಿಗೆ ಸ್ಥಳಾವಕಾಶ ದೊರಕುತ್ತಿದೆಯೇ?, ಅವರಿಗೆ ಇನ್ನೊಂದಿಷ್ಟು ಹೆಚ್ಚು ಭೋಗಿಗಳನ್ನ, ರೈಲುಗಳನ್ನ ಬಿಡಬೇಕು, ಗ್ರಾಮಸ್ಥರು ಯಾವ ರೀತಿ ಸಂಚರಿಸುತ್ತಿದ್ದಾರೆ, ಗ್ರಾಮಗಳ ಸಮಸ್ಯೆಗಳೇನು ಎಂಬುದನ್ನು ಅರಿತುಕೊಳ್ಳದೆ ಇಲಾಖೆ ತಿರಸ್ಕಾರ ಭಾವನೆಯನ್ನು ಹೊಂದುತ್ತಿದೆ ಎಂದು ಆಪಾದಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!