ರೈತ ಕುಲ ಉಳಿದರೆ ದೇಶಕ್ಕೆ ಉಳಿಗಾಲ
ದಾವಣಗೆರೆ: ರೈತರು ನಾಶವಾದರೇ ಈ ದೇಶವೇ ನಾಶವಾದಂತೆ. ರೈತ ಕುಲ ಉಳಿದರೆ ಮಾತ್ರ ದೇಶ ಉಳಿಯುತ್ತವೆ. ಸರ್ಕಾರದ ಎಲ್ಲಾ ಅಂಗಗಳು ರೈತರ ಮೇಲೆ ನಿಂತಿವೆ ಎಂದು ಹಿರಿಯ ವಕೀಲ ಎಲ್.ಹೆಚ್.ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆ ಆವರಣದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ದಾವಣಗೆರೆ ಸಮಿತಿಯಿಂದ ನರಗುಂದ ರೈತ ಬಂಡಾಯಕ್ಕೆ 41ನೇ ವರ್ಷ ಪೂರೈಸಿದ್ದ ಪ್ರಯುಕ್ತ ಆಯೋಜಿಸಲಾಗಿದ್ದ ಸ್ಮರಣಾರ್ಥ ಸಭೆಯಲ್ಲಿ ಪಾಲ್ಗೊಂಡು ಸ್ವಾತಂತ್ರö್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಆದರೆ ನಮ್ಮನ್ನಾಳುವ ಕೇಂದ್ರ, ರಾಜ್ಯ ಸರ್ಕಾರಗಳು ರೈತ, ಜನ, ಕಾರ್ಮಿಕ ವಿರೋಧಿ ನೀತಿಯನ್ನು ಜಾರಿಗೆ ತರುವ ಮೂಲಕ ರೈತರ ಚಳುವಳಿಗಳನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಕಾರಣ ದೇಶದ ಎಲ್ಲಾ ರೈತರು ಹೋರಾಟಕ್ಕೆ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.
ದೇಶದ ರೈತ ಚಳುವಳಿಯಲ್ಲಿ ರಾಜ್ಯದ ನರಗುಂದ ರೈತ ಚಳುವಳಿ ಒಂದು ಮೈಲಿಗಲ್ಲು. ಆ ಚಳುವಳಿಯ ನಂತರವೇ ದೇಶದಲ್ಲಿ ಹಲವಾರು ರೈತ ಸಂಘಟನೆಗಳು ಹುಟ್ಟಿಕೊಂಡವು. ನಂತರ ರೈತರ ಧ್ವನಿಗೆ ಶಕ್ತಿಯಾಯಿತು. ಅಂತೆಯೇ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್ ಮಾತನಾಡಿ, ದೇಶ ಆರ್ಥಿಕವಾಗಿ ದಿವಾಳಿಯಾದರೆ ಪುನರುಜ್ಜೀವನ ಮಾಡಬಹುದು. ಆದರೆ ಮಾನಸಿಕವಾಗಿ ದಿವಾಳಿಯಾದರೆ ಪುನರುಜ್ಜೀವನ ಆಗುವುದು ಕಷ್ಟ. ಈಗ ನಮ್ಮ ದೇಶವು ಮಾನಸಿಕವಾಗಿ ದಿವಾಳಿಯಾಗಿದೆ. ಸರ್ಕಾರಗಳು ಧರ್ಮದ ಲೇಪನಕೊಟ್ಟು ತಾನೇ ಮಾಡಿದ್ದು ಸರಿ ಎಂದು ದರ್ಪ ತೋರಿಸುತ್ತಿವೆ. ಯಾವುದೇ ದೇಶವಾಗಲೀ ಧರ್ಮಾಧರಿತ ಆಡಳಿತ ನಡೆಸಿದರೆ ಬಹಳ ದಿನ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಿರಿಯ ವಕೀಲ ಅನಿಷ್‌ಪಾಷಾ ಮಾತನಾಡಿ, ದೇಶದಲ್ಲಿ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ರೈತ ಪ್ರತಿ ಹಂತದಲ್ಲೂ ತುಳಿತಕ್ಕೆ ಒಳಗಾಗುತ್ತಿದ್ದಾನೆ. ಕಳೆದ 8 ತಿಂಗಳಿಂದ ದೆಹಲಿಯಲ್ಲಿ ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದರೂ ಸಹ 3 ಕಾಯಿದೆಗಳೂ, ಎಂಎಸ್‌ಪಿ ನಿಗಧಿ ಮಾಡಲು ಒತ್ತಾಯಿಸಿದ್ದರೂ ಸಹ ಕೇಂದ್ರ ಸರ್ಕಾರ ತನ್ನ ಅಧಿಕಾರದ ದರ್ಪ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಈ ವೇಳೆ ಕಾರ್ಮಿಕ ಮುಖಂಡರಾದ ಆವರಗೆರೆ ಹೆಚ್.ಜಿ.ಉಮೇಶ್, ಪಿ.ಕೆ.ಲಿಂರಾಜು, ಭೀಮಾರೆಡ್ಡಿ, ಸತೀಶ್ ಅರವಿಂದ್, ರೇಣುಕಾ ಯಲ್ಲಮ್ಮ, ಸಾವಿತ್ರಮ್ಮ, ಶ್ರೀನಿವಾಸ್, ಅಂಜಿನಪ್ಪ ಪೂಜಾರ್, ನರೇಗಾ ರಂಗನಾಥ್, ಐರಣಿ ಚಂದ್ರು, ಮಂಜುನಾಥ್ ಕೈದಾಳೆ, ತಿಪ್ಪೇಸ್ವಾಮಿ ಸೇರಿದಂತೆ ಎಐಕೆಎಸ್, ಕೆಪಿಆರ್‌ರೆಸ್, ಆರ್‌ಕೆಎಸ್, ಕಬ್ಬು ಬೆಳೆಗಾರರ ಸಂಘದ ಮುಖಂಡರು ಇದ್ದರು.