ರಾಜಕಾರಣದಲ್ಲಿ ಸಕ್ರಿಯವಾಗಿದ್ದೆನೆ | ಚುನಾವಣೆ ಎದುರಿಸಲು ಸಿದ್ದ – ಎಸ್ ಎಸ್ ಮಲ್ಲಿಕಾರ್ಜುನ

ದಾವಣಗೆರೆ: ತಾವು ರಾಜಕಾರಣದಲ್ಲಿ ಸಕ್ರಿಯವಾಗಿದ್ದು, ಚುನಾವಣೆ ಎದುರಿಸಲು ಯಾವಾಗಬೇಕಿದ್ದರೂ ಸಿದ್ಧವಿರುವುದಾಗಿ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ ಘೋಷಿಸಿದ್ದಾರೆ.
ನಗರದ ಕಲ್ಲೇಶ್ವರ ಮಿಲ್ ನಲ್ಲಿ ಸಿರಿಗೆರೆ ಮಠಕ್ಕೆ 200 ಕ್ವಿಂಟಾಲ್ ಅಕ್ಕಿ ವಿತರಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಚುನಾವಣೆ ಎದುರಿಸಲು ದಿನದ 24 ಗಂಟೆಯೂ ಸಿದ್ಧನಿದ್ದೇನೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆ ಬಿಜೆಪಿಗೆ ಪ್ರಯಾಸ ಪಡುವಂತಾಗಲಿದೆ. ಮೋದಿ ಅಲೆಯಲ್ಲಿ ರಾಜ್ಯದಲ್ಲಿ ಗೆಲುವು ಕಾಣುವುದು ಕಷ್ಟಕರ ಎಂಬ ಸತ್ಯವನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಚ್ಚಿಟ್ಟಿರುವುದು ಸರಿಯಾಗಿದೆ. ಕಾಂಗ್ರೆಸ್ ಈ ಬಾರಿ ಎದ್ದು ಕೂತಿದ್ದು, ಗೆಲವು ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ಕಾರ್ಯಕಾರಿಣಿ ನಡೆಸಿದರು.ಆದರೆ, ಜನರಿಗೆ, ರೈತರಿಗೆ ಅನುಕೂಲವಾಗುವ ಯಾವ ನಿರ್ಣಯ ತೆಗೆದುಕೊಳ್ಳದೆ ಕೇವಲ ಸಭೆ ಮಾಡಿದ್ದಾರೆ. ಇವರಿಗೆ ಹಣವಿತ್ತು ಅದನ್ನು ಖರ್ಚು ಮಾಡುವುದಕ್ಕೆ ಬಂದಿದ್ದರು. ಸಭೆ ನಡೆಸಿದರು, ಊಟ ಮಾಡಿದರು ಹೋದರು ಎಂದು ಲೇವಡಿ ಮಾಡಿದರು.
ಇದ್ದಲ್ಲಿಯೇ ಹಾರೈಸಿ: ಮಲ್ಲಿಕಾರ್ಜುನ್ ಅವರು ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹೆಚ್ಚಾಗಿ ಜನರಾಗಲೀ, ಕಾಂಗ್ರೆಸ್ ಮುಖಂಡರಾಗಲೀ, ಕಾರ್ಯಕರ್ತರಾಗಲೀ ಮನೆಗೆ ಬರುವುದು ಬೇಡ. ಕೊರೊನಾ ಹಿನ್ನೆಲೆಯಲ್ಲಿ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಎಲ್ಲಿರುತ್ತೀರೋ ಅಲ್ಲಿಂದಲೇ ಶುಭಾಶಯ ಕೋರಿ ಎಂದು ಮನವಿ ಮಾಡಿದರು.
ಪರಸ್ಪರ ಅಂತರ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿರುವುದರಿಂದ ಅದನ್ನು ಪಾಲಿಸೋಣ. ಹಾರ-ತುರಾಯಿಗಳಿಗಿಂತ ನಿಮ್ಮ ಹೃದಯಾಳದ ಹಾರೈಕೆ ಅಮೂಲ್ಯವಾದುದು ಎಂದು ನಾನು ಭಾವಿಸಿದ್ದೇನೆ ಎಂದು ವಿನಂತಿಸಿದರು.