ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯ ಶಕ್ತಿ ಹುಟ್ಟು ಹಾಕಿದ ರಾಮಕೃಷ್ಣ ಹೆಗಡೆ

ದಾವಣಗೆರೆ: ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಶಕ್ತಿ ಹುಟ್ಟು ಹಾಕುವಲ್ಲಿ ರಾಮಕೃಷ್ಣ ಹೆಗಡೆಯವರಂತಹ ನಾಯಕರ ಪಾತ್ರ ಮಹತ್ವದ್ದಾಗಿದೆ. ಆ ಫಲವನ್ನೇ ಈಗಿನ ಮೌಲ್ಯರಹಿತ ರಾಜಕೀಯ ಪಕ್ಷಗಳು ಅನುಭವಿಸುತ್ತಿವೆ ಎಂದು ಲೋಕ್ ಶಕ್ತಿ ಪಾರ್ಟಿ ರಾಜ್ಯಾಧ್ಯಕ್ಷ ಚಂದ್ರಶೇಖರ ವಿ. ಸ್ಥಾವರಮಠ್ ಟೀಕಿಸಿದರು.
ನಗರದ ರೋಟರಿ ಬಾಲಭವನದಲ್ಲಿ ನಡೆದ ಲೋಕ್ ಶಕ್ತಿ ಪಾರ್ಟಿ ದಾವಣಗೆರೆ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಜ್ತದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ 1983ರಲ್ಲಿ ರಾಮಕೃಷ್ಣ ಹೆಗಡೆಯವರು ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ವಹಿಸಿಕೊಂಡಿದ್ದರು. ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಾಷ್ಟ್ರನಾಯಕರೆಂದರೆ ಅತಿಶಯೋಕ್ತಿಯಲ್ಲ. ತುರ್ತು ಪರಿಸ್ಥಿತಿಯ ಕರಾಳತೆಯನ್ನು ಎದುರಿಸಿ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಾರಿಗೊಳಿಸಿದ್ದ ಜನಪರ ಯೋಜನೆ, ಕಾರ್ಯಕ್ರಮಗಳನ್ನೇ ಈಗಿನ ಸರ್ಕಾರಗಳು ತಮ್ಮದೆಂಬಂತೆ ಬಿಂಬಿಸಿಕೊಳ್ಳುತ್ತಿವೆ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಮತಾ ಪಾಟೀಲ್ ಮಾತನಾಡಿ, ಇಂದಿನ ಪೀಳಿಗೆಗೆ ರಾಮಕೃಷ್ಣ ಹೆಗಡೆ ಬಗ್ಗೆ ಗೊತ್ತಿಲ್ಲ. ಹೆಗಡೆಯವರು ಬೆಳೆಸಿದ ಅನೇಕರು ಈಗ ರಾಜಕೀಯವಾಗಿ ಎತ್ತರಕ್ಕೇರಿದ್ದಾರೆ. ಅಂತಹವರಿಗೆ ಹೆಗಡೆಯವರನ್ನು ಸ್ಮರಿಸುವ ಕೃತಜ್ಞತೆಯೂ ಇಲ್ಲವಾಗಿದೆ. ಇಂದಿನ ರಾಜಕೀಯ ಪಕ್ಷಗಳಿಗೆ ಜನರನ್ನು ಹಣ ಕೊಟ್ಟು ಕರೆತರುವ ಸ್ಥಿತಿ ಬಂದಿದೆ. ಹೆಗಡೆಯವರ ಮೌಲ್ಯ, ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.